×
Ad

ಜಾರಿ ನಿರ್ದೇಶನಾಲಯದಿಂದ ಗುಜರಾತ್ ಸಮಾಚಾರ್ ಪತ್ರಿಕೆಯ ಮಾಲಕನ ಬಂಧನ

Update: 2025-05-16 11:16 IST

ಬಾಹುಬಲಿ ಶಾ (Photo: thesouthfirst.com)

ಹೊಸದಿಲ್ಲಿ : ಆರ್ಥಿಕ ವಂಚನೆ ಆರೋಪದಲ್ಲಿ 'ಗುಜರಾತ್ ಸಮಾಚಾರ್' ದಿನಪತ್ರಿಕೆಯ ಮಾಲಕನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.

ಗುರುವಾರ ರಾತ್ರಿ ಗುಜರಾತ್ ಸಮಾಚಾರ್ ದಿನಪತ್ರಿಕೆಯ ಮಾಲಕ ಬಾಹುಬಲಿ ಶಾ ಅವರನ್ನು ಬಂಧಿಸಿರುವ ಬಗ್ಗೆ ಕುಟುಂಬದ ಆಪ್ತ ಮೂಲಗಳನ್ನು ಉಲ್ಲೇಖಿಸಿ Deccan Herald ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್‌, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರಕಾರದ ವಿರುದ್ಧ ಟೀಕಾತ್ಮಕ ಬರಹವನ್ನು ಬರೆದ ಕಾರಣಕ್ಕೆ ಬಾಹುಬಲಿ ಶಾ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಆರೋಪಿಸಿದೆ.

ಗುಜರಾತ್ ಕಾಂಗ್ರೆಸ್ ಅಧ್ಯಕ್ಷ, ರಾಜ್ಯಸಭಾ ಸಂಸದ ಶಕ್ತಿಸಿನ್ಹ ಗೋಹಿಲ್ ಈ ಕುರಿತು ಪ್ರತಿಕ್ರಿಯಿಸಿ, ಆದಾಯ ತೆರಿಗೆ ಇಲಾಖೆ ನಡೆಸಿದ ಕಾರ್ಯಾಚರಣೆಯ ನಂತರ ಈಡಿ ಬಾಹುಬಲಿ ಶಾ ಅವರನ್ನು ಬಂಧಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರಕಾರದ ವಿರುದ್ಧ ಪತ್ರಿಕೆ ಟೀಕಾತ್ಮಕ ಬರಹವನ್ನು ಬರೆದಿರುವುದು ಅವರ ಬಂಧನದ ಹಿಂದಿನ ನಿಜವಾದ ಕಾರಣ ಎಂದು ಹೇಳಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಗೋಹಿಲ್, ಇತ್ತೀಚಿನ ಭಾರತ-ಪಾಕಿಸ್ತಾನ ಸಂಘರ್ಷದ ಬಗ್ಗೆ ಗುಜರಾತ್ ಸಮಾಚಾರ್ ವರದಿ ಮಾಡಿದ್ದರಿಂದ ಅದನ್ನು ಗುರಿಯಾಗಿಸಲಾಗಿದೆ ಎಂದು ಆರೋಪಿಸಿದ್ದಾರೆ. ಸತ್ಯಕ್ಕಾಗಿ ನಿಲ್ಲುವವರನ್ನು ಶಿಕ್ಷಿಸುವುದು ಬಿಜೆಪಿ ಸರಕಾರದ ಧ್ಯೇಯವಾಗಿದೆ. ಪ್ರಮುಖ ಗುಜರಾತಿ ಪತ್ರಿಕೆ ಗುಜರಾತ್ ಸಮಾಚಾರ್ ಅಧಿಕಾರ ಶಾಹಿಗಳ ವಿರುದ್ಧ ಧ್ವನಿ ಎತ್ತಿದೆ. ಇತ್ತೀಚಿನ ಭಾರತ-ಪಾಕಿಸ್ತಾನ ಸಂಘರ್ಷದ ಬಗ್ಗೆ ಗುಜರಾತ್ ಸಮಾಚಾರ್ ವರದಿ ಮಾಡಿದ್ದರಿಂದ ಮೋದಿ ತನ್ನ ನೆಚ್ಚಿನ ಟೂಲ್ ಕಿಟ್ ಬೇಟೆಗಾರರನ್ನು ಬಿಡುಗಡೆ ಮಾಡಿದ್ದಾರೆ. ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯ ಗುಜರಾತ್ ಸಮಾಚಾರ್ ಮತ್ತು ಅದರ ದೂರದರ್ಶನ ಚಾನೆಲ್ GSTv ಜೊತೆಗೆ ಇತರ ಸಂಬಂಧಿತ ಸಂಸ್ಥೆಗಳ ಮೇಲೆ ದಾಳಿ ಮಾಡಿದೆ. ಗುಜರಾತ್ ಸಮಾಚಾರ್ ಮಾಲಕ ಬಾಹುಬಲಿಭಾಯಿ ಶಾ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಬಂಧನದ ಬಳಿಕ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಶಾ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News