×
Ad

ತಮಿಳುನಾಡು | ರಸ್ತೆ ಅಗಲೀಕರಣಕ್ಕೆ ಶಾಲಾ ಕೊಠಡಿ ನೆಲಸಮ; 5.6 ಕೋಟಿ ರೂ. ಪರಿಹಾರ ಪಾವತಿಸಿದ NHAI!

Update: 2025-11-08 21:57 IST

PC : thehindu.com

ವೆಲ್ಲೋರ್ (ತಮಿಳುನಾಡು): ರಸ್ತೆ ವಿಸ್ತರಣೆಗಾಗಿ ವೆಲ್ಲೋರ್ ನ ಕಟ್ಪಾಡಿ ಬಳಿಯ ತಿರುವಲಂ ಗ್ರಾಮದ ಬಳಿ ಇರುವ ಸರಕಾರಿ ಬಾಲಕರ ಪ್ರೌಢ ಶಿಕ್ಷಣ ಶಾಲೆಯ ತರಗತಿ ಕೊಠಡಿಗಳನ್ನು ನೆಲಸಮಗೊಳಿಸಿದ್ದಕ್ಕೆ ತಮಿಳುನಾಡು ಶಾಲಾ ಶಿಕ್ಷಣ ಇಲಾಖೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಬರೋಬ್ಬರಿ 5.6 ಕೋಟಿ ರೂ. ಪರಿಹಾರ ಮೊತ್ತ ಪಾವತಿಸಿದೆ ಎಂದು thehindu ವರದಿ ಮಾಡಿದೆ.

ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 48ರ ವಿಸ್ತರಣೆಯ ಭಾಗವಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು ಶಾಲೆಗೆ ಸೇರಿದ 1,784 ಚದರ ಮೀಟರ್ ವಿಸ್ತೀರ್ಣದ ಜಾಗವನ್ನು ತನ್ನ ಸ್ವಾಧೀನಕ್ಕೆ ಪಡೆಯಲು ಶಾಲೆಯ ತರಗತಿ ಕೊಠಡಿಗಳು ಹಾಗೂ ತಡೆಗೋಡೆಯನ್ನು ನೆಲಸಮಗೊಳಿಸಿತ್ತು.

ಬಳಕೆಯಲ್ಲಿರದ ಎಂಟು ತರಗತಿ ಕೊಠಡಿಗಳು ಹಾಗೂ ತಡೆಗೋಡೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ನೆಲಸಮಗೊಳಿಸಿರುವುದರಿಂದ, ವಿದ್ಯಾರ್ಥಿಗಳು ಶಾಲೆಯನ್ನು ಪ್ರವೇಶಿಸುವ ಮಾರ್ಗವು ಕೆಸರಿನಿಂದ ತುಂಬಿತ್ತು. ಇದರಿಂದ, ನೂರಾರು ವಿದ್ಯಾರ್ಥಿಗಳು ಶಾಲೆಯನ್ನು ಸುರಕ್ಷಿತವಾಗಿ ಪ್ರವೇಶಿಸಲಾಗದೆ ಕಷ್ಟಪಡುತ್ತಿದ್ದರು.

ಸ್ವಾಧೀನಪಡಿಸಿಕೊಂಡಿರುವ ಶಾಲೆಯ ಜಾಗಕ್ಕೆ ಇನ್ನೂ ಪರಿಹಾರವನ್ನು ಪಾವತಿಸದಿರುವುದರಿಂದ, ಶಾಲೆಯ ಕಟ್ಟಡದ ದುರಸ್ತಿ ಕಾರ್ಯ, ಶಾಲೆಯ ಆವರಣದ ಸಮತಟ್ಟು ಕೆಲಸ ಹಾಗೂ ಶಾಲಾ ಆವರಣದೊಳಗೆ ಹೊಸ ತರಗತಿ ಕೊಠಡಿಗಳನ್ನು ನಿರ್ಮಿಸಲು ಜಾಗ ಗುರುತಿಸುವ ಕೆಲಸವನ್ನು ಮಾಡಲಾಗುತ್ತಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದರು.

ರಸ್ತೆ ವಿಸ್ತರಣೆಗಾಗಿ ತಿರುವಲಂನ ಶಾಲಾ ಜಾಗವನ್ನು ಸ್ವಾಧೀನಪಡಿಸಿಕೊಂಡಿರುವುದಕ್ಕಾಗಿ ಪರಿಹಾರ ಮೊತ್ತ ಪಾವತಿಸುವಂತೆ ಮುಖ್ಯ ಶಿಕ್ಷಣಾಧಿಕಾರಿಗಳು ಕೃಷ್ಣಗಿರಿ ಮೂಲದ ಯೋಜನಾ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಇದರ ಬೆನ್ನಿಗೇ, ಆ ಮನವಿಯನ್ನು ಅಕ್ಟೋಬರ್ ತಿಂಗಳಲ್ಲಿ ಹೊಸದಿಲ್ಲಿಯ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಪ್ರಧಾನ ವ್ಯವಸ್ಥಾಪಕರ ಅನುಮೋದನೆಗೆ ಕಳುಹಿಸಿಕೊಡಲಾಗಿತ್ತು ಎಂದು ಹೇಳಲಾಗಿದೆ.

ಪರಿಹಾರ ಮೊತ್ತ ಪಾವತಿಸಿರುವುದಲ್ಲದೆ, ಶುಕ್ರವಾರದಂದು ಶಾಲಾ ಆವರಣದಲ್ಲಿನ ನೆಲಸಮಗೊಳಿಸಿದ ತೆರೆದ ಜಾಗದ ಸಮತಟ್ಟುಗೊಳಿಸುವ ಕಾರ್ಯವನ್ನೂ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ನಡೆಸಿತು. ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತರಿಗೊಳಿಸಲು ತುರ್ತು ಕ್ರಮ ಕೈಗೊಂಡ ಜಿಲ್ಲಾಡಳಿತ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರಕ್ಕೆ ಶಾಲಾ ಆಡಳಿತ ಮಂಡಳಿ ಧನ್ಯವಾದ ಸಲ್ಲಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News