ಎನ್‌ಐಎಯಿಂದ ಐಸಿಸ್ ಸ್ಲೀಪರ್ ಸೆಲ್‌ನ ಇಬ್ಬರು ಶಂಕಿತರ ಬಂಧನ
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್‌ನ ಸ್ಪೀಪರ್ ಸೆಲ್‌ನ ತಲೆಮರೆಸಿಕೊಂಡ ಇಬ್ಬರು ಶಂಕಿತರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ)ದ ಜೋಡಣೆ ಹಾಗೂ ಪರಿಶೀಲನೆಗೆ ಸಂಬಂಧಿಸಿದ 2023ರ ಪ್ರಕರಣದಲ್ಲಿ ಇವರಿಬ್ಬರು ಬೇಕಾದವರಾಗಿದ್ದಾರೆ.
ಆರೋಪಿಗಳನ್ನು ಅಬ್ದುಲ್ಲಾ ಫಯಾಝ್ ಶೇಖ್ ಆಲಿಯಾಸ್ ಡೈಪರ್‌ವಾಲಾ ಹಾಗೂ ತಲ್ಲಾ ಖಾನ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಇಂಡೋನೇಶ್ಯಾದ ಜಕಾರ್ತದಲ್ಲಿ ತಲೆ ಮರೆಸಿಕೊಂಡಿದ್ದರು. ಇವರು ಭಾರತಕ್ಕೆ ಆಗಮಿಸುವ ಸಂದರ್ಭ ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜಾ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಶುಕ್ರವಾರ ವಲಸೆ ಬ್ಯುರೊ ಅಧಿಕಾರಿಗಳು ತಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡ ಅವರನ್ನು ವಶಕ್ಕೆ ತೆಗೆದುಕೊಂಡಿತು ಹಾಗೂ ಬಂಧಿಸಿತು ಎಂದು ಎನ್‌ಐಎಯ ಹೇಳಿಕೆ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಇವರಿಬ್ಬರು ಬೇಕಾದವರಾಗಿದ್ದರು. ಇವರು ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದರು. ಮುಂಬೈಯ ಎನ್‌ಐಎ ವಿಶೇಷ ನ್ಯಾಯಾಲಯ ಇವರಿಬ್ಬರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿತ್ತು. ಅಲ್ಲದೆ, ಇವರ ಬಗ್ಗೆ ಮಾಹಿತಿ ನೀಡುವವರಿಗೆ 3 ಲಕ್ಷ ರೂ. ಬಹುಮಾನ ಘೋಷಿಸಿತ್ತು.
ಈ ಪ್ರಕರಣ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಹಾಗೂ ಸರಕಾರದ ವಿರುದ್ಧ ಸಮರ ಹೂಡಲು ಅತಿ ದೊಡ್ಡ ಪಿತೂರಿಗೆ ಸಂಬಂಧಿಸಿದೆ. ಈ ಪ್ರಕರಣದಲ್ಲಿ ಒಟ್ಟು 10 ಮಂದಿ ಆರೋಪಿಗಳಲ್ಲಿ ಇತ್ತೀಚೆಗೆ ಬಂಧಿಸಿದ ಇಬ್ಬರು ಸೇರಿದಂತೆ ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ.