ನಿಮಿಷಾ ಪ್ರಿಯಾ ಪ್ರಕರಣ | ಪರಿಹಾರ ಕಂಡುಕೊಳ್ಳಲು ಯೆಮೆನ್ ಜೊತೆ ಸಂಪರ್ಕದಲ್ಲಿದ್ದೇವೆ: ಕೇಂದ್ರ
ನಿಮಿಷಾ ಪ್ರಿಯಾ | PC : X
ಹೊಸದಿಲ್ಲಿ,ಜು.17: ಯೆಮೆನ್ ನಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಪ್ರಕರಣದಲ್ಲಿ ಪರಸ್ಪರ ಸಹಮತದ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನಗಳ ಭಾಗವಾಗಿ ತಾನು ಯೆಮೆನಿ ಅಧಿಕಾರಿಗಳು ಮತ್ತು ಕೆಲವು ಮಿತ್ರದೇಶಗಳೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಕೇಂದ್ರ ಸರಕಾರವು ಗುರುವಾರ ತಿಳಿಸಿದೆ.
ಇದೊಂದು ಸೂಕ್ಷ್ಮ ವಿಷಯವಾಗಿದ್ದು,ಭಾರತ ಸರಕಾರವು ಪ್ರಕರಣದಲ್ಲಿ ಸಾಧ್ಯವಿರುವ ಎಲ್ಲ ನೆರವನ್ನೂ ಒದಗಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಈ ಪ್ರಕರಣದಲ್ಲಿ ಕಾನೂನು ನೆರವು ಒದಗಿಸಿರುವ ಜೊತೆಗೆ ನಿಮಿಷಾ ಕುಟುಂಬಕ್ಕೆ ನೆರವಾಗಲು ವಕೀಲರನ್ನು ನೇಮಿಸಿದ್ದೇವೆ. ನಿಯಮಿತ ಕಾನ್ಸುಲರ್ ಭೇಟಿಗಳಿಗೂ ನಾವು ವ್ಯವಸ್ಥೆ ಮಾಡಿದ್ದೇವೆ ಮತ್ತು ನಿಮಿಷಾರನ್ನು ಗಲ್ಲುಶಿಕ್ಷೆಯಿಂದ ಪಾರು ಮಾಡಲು ಸ್ಥಳೀಯ ಅಧಿಕಾರಿಗಳು ಮತ್ತು ಕುಟುಂಬದ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದು ಅವರು ಹೇಳಿದರು.
ನಿಮಿಷಾ ಪ್ರಿಯಾರ ಗಲ್ಲುಶಿಕ್ಷೆಯನ್ನು ಮಂದೂಡುವುದರಲ್ಲಿ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಅವರ ಪಾತ್ರದ ಕುರಿತು ಪ್ರಶ್ನೆಗೆ ‘ನನಗೆ ಆ ಬಗ್ಗೆ ಯಾವುದೇ ಮಾಹಿತಿಯಿಲ್ಲ’ ಎಂದು ಜೈಸ್ವಾಲ್ ಉತ್ತರಿಸಿದರು.