ನಿಮಿಷಾ ಪ್ರಿಯಾಳನ್ನು ತಕ್ಷಣವೇ ಗಲ್ಲಿಗೇರಿಸಿ: ಯೆಮೆನ್ ನ್ಯಾಯಾಲಯವನ್ನು ಆಗ್ರಹಿಸಿದ ಮೃತ ತಲಾಲ್ ಅಬ್ದೊ ಮಹ್ದಿಯ ಸಹೋದರ
PC : theweek.in
ಸನಾ(ಯೆಮನ್): ಹತ್ಯೆ ಪ್ರಕರಣದಲ್ಲಿ ದೋಷಿಯೆಂದು ಸಾಬೀತಾಗಿರುವ ಕೇರಳದ ಶುಶ್ರೂಷಕಿ ನಿಮಿಷಾ ಪ್ರಿಯಾರ ಮರಣದಂಡನೆಯನ್ನು ಯೆಮೆನ್ ನ ಹೌದಿ ಸರಕಾರ ಮುಂದೂಡಿದ ಕೆಲವೇ ವಾರಗಳ ನಂತರ, ಆಕೆಯನ್ನು ತಕ್ಷಣವೇ ಗಲ್ಲಿಗೇರಿಸಬೇಕು ಎಂದು ಸಂತ್ರಸ್ತ ವ್ಯಕ್ತಿಯ ಕುಟುಂಬದ ಸದಸ್ಯರು ಆಗ್ರಹಿಸಿದ್ದಾರೆ.
2017ರಲ್ಲಿ ತಲಾಲ್ ಅಬ್ದೊ ಮಹ್ದಿ ಎಂಬ ವ್ಯಕ್ತಿಯನ್ನು ಹತ್ಯೆಗೈದ ಆರೋಪಕ್ಕೀಡಾಗಿದ್ದ ನಿಮಿಷಾ ಪ್ರಿಯಾಗೆ 2020ರಲ್ಲಿ ಮರಣದಂಡನೆ ವಿಧಿಸಲಾಗಿತ್ತು. ಆಕೆಯನ್ನು ಜುಲೈ 16ರಂದು ಗಲ್ಲಿಗೇರಿಸಬೇಕಿತ್ತು. ಆದರೆ, ಭಾರತ ಸರಕಾರ ಮಧ್ಯಪ್ರವೇಶಿಸಿದ್ದರಿಂದ, ಯೆಮೆನ್ ಪ್ರಾಧಿಕಾರಗಳು ಈ ಶಿಕ್ಷೆಯನ್ನು ಮುಂದೂಡಿದ್ದವು ಎಂದು ವರದಿಯಾಗಿತ್ತು.
ಈ ಸಂಬಂಧ ರವಿವಾರ ಯೆಮೆನ್ ಅಟಾರ್ನಿ ಜನರಲ್ ನ್ಯಾಯಾಧೀಶ ಅಬ್ದುಲ್ ಸಲಾಮ್ ಅಲ್-ಹೌದಿಗೆ ಪತ್ರ ಬರೆದಿರುವ ತಲಾಲ್ ಸಹೋದರ ಅಬ್ದುಲ್ ಫತ್ತಾ ಮಹ್ದಿ, ತಕ್ಷಣವೇ ನಿಮಿಷಾ ಪ್ರಿಯಾಳನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದ್ದಾರೆ.
“ನಾವು ಮರುಪರಿಶೀಲನೆಯನ್ನು ಸಾರಾಸಗಟಾಗಿ ನಿರಾಕರಿಸುತ್ತೇವೆ” ಎಂದು ಅವರು ತಮ್ಮ ಪತ್ರದಲ್ಲಿ ಖಡಾಖಂಡಿತವಾಗಿ ಹೇಳಿದ್ದಾರೆ. ಶಿಕ್ಷೆ ಮುಂದೂಡಿದ ನಂತರ, ಒಂದು ತಿಂಗಳಾದರೂ ಗಲ್ಲು ಶಿಕ್ಷೆಯ ಹೊಸ ದಿನಾಂಕವನ್ನು ಪ್ರಕಟಿಸಲಾಗಿಲ್ಲ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಪ್ರತೀಕಾರದ ಕ್ರಮವನ್ನು ಜಾರಿಗೊಳಿಸುವ ನೈತಿಕ ಹಕ್ಕಿಗೆ ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ ಎಂದು ಮರು ದೃಢಪಡಿಸುತ್ತಿದ್ದೇವೆ” ಎಂದೂ ಅವರು ತಮ್ಮ ಪತ್ರದಲ್ಲಿ ಒತ್ತಿ ಹೇಳಿದ್ದಾರೆ.
ಜುಲೈ 25ರಂದು ಇದೇ ಬಗೆಯ ಪತ್ರ ಬರೆದ ನಂತರ, ಇದು ಅಬ್ದುಲ್ ರವಾನಿಸಿರುವ ಎರಡನೆ ಪತ್ರವಾಗಿದ್ದು, ಗಲ್ಲು ಶಿಕ್ಷೆಯ ಹೊಸ ದಿನಾಂಕವನ್ನು ಪ್ರಕಟಿಸುವಂತೆ ಆಗ್ರಹಿಸಿದ್ದಾರೆ. ಇದೇ ವೇಳೆ ಭಾರತೀಯ ಮಾಧ್ಯರಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಅಬ್ದುಲ್, ನಿಮಿಷಾ ಪ್ರಿಯಾ ಮರಣ ದಂಡನೆಯನ್ನು ರದ್ದುಗೊಳಿಸಲಾಗಿದೆ ಎಂಬ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಅವರ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.
“ಸಂಧಾನದ ಮಾರುಕಟ್ಟೆಯಲ್ಲಿ ತಲಾಲ್ ನೆತ್ತರು ಮಾರಾಟದ ವಸ್ತುವಲ್ಲ” ಎಂದೂ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮೃತ ತಲಾಲ್ ಅಬ್ದೊ ಮಹ್ದಿಯ ಪ್ರಾಯೋಜಕತ್ವದಲ್ಲಿ ಕೇರಳ ಶುಶ್ರೂಷಕಿ ನಿಮಿಷಾ ಪ್ರಿಯಾ ಅವರು ಸನಾದಲ್ಲಿ ಕ್ಲಿನಿಕ್ ಒಂದನ್ನು ಸ್ಥಾಪಿಸಿದ್ದರು. ನಂತರ, ತಾವಿಬ್ಬರೂ ವಿವಾಹವಾಗಿದ್ದೇವೆ ಎಂದು ಬಿಂಬಿಸಲು ನಕಲಿ ವಿವಾಹ ದಾಖಲೆಗಳನ್ನು ಸೃಷ್ಟಿಸಿದ್ದ ತಲಾಲ್, ಆಕೆಯ ಪಾಸ್ ಪೋರ್ಟ್ ಅನ್ನು ಕಿತ್ತುಕೊಂಡಿದ್ದ ಎಂದು ಆರೋಪಿಸಲಾಗಿದೆ. ಆತ ಆಕೆಯ ಮೇಲೆ ದೈಹಿಕ ಮತ್ತು ಮಾನಸಿಕ ದೌರ್ಜನ್ಯಗಳನ್ನು ನಡೆಸಿದ್ದ ಎಂದೂ ಆಪಾದಿಸಲಾಗಿದೆ.
ನಿಮಿಷಾ ಪ್ರಿಯಾ ತನ್ನ ಪಾಸ್ ಪೋರ್ಟ್ ಅನ್ನು ಮರಳಿ ಪಡೆಯಲು ಹಾಗೂ ಆತನ ಕಪಿಮುಷ್ಟಿಯಿಂದ ಪಾರಾಗಲು, ಆತನಿಗೆ ಅರವಳಿಕೆ ನೀಡಿದ್ದರು ಎನ್ನಲಾಗಿದೆ. ಆದರದು ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿದ್ದುದರಿಂದ, ತಲಾಲ್ ಮೃತಪಟ್ಟಿದ್ದರು. ಆಕೆ ಅಲ್ಲಿಂದ ಪರಾರಿಯಾಗುವುದಕ್ಕೂ ಮುನ್ನ, ಆತನ ಮೃತ ದೇಹವನ್ನು ನೀರಿನ ತೊಟ್ಟಿಯೊಂದರಲ್ಲಿ ಹುದುಗಿಸಿಟ್ಟಿದ್ದರು ಎನ್ನಲಾಗಿದೆ. ಬಳಿಕ ಯೆಮೆನ್ ಪೊಲೀಸರು ಸೌದಿ ಗಡಿಯ ಬಳಿ ಆಕೆಯನ್ನು ವಶಕ್ಕೆ ಪಡೆದಿದ್ದರು.