×
Ad

ಪ್ರಜಾಪ್ರಭುತ್ವ ವಿರೋಧಿ ಮೋದಿ ಆಡಳಿತವನ್ನು ಪ್ರಶ್ನಿಸಿದ್ದಕ್ಕಾಗಿ ನನ್ನ ಒಸಿಐ ಸ್ಥಾನಮಾನ ರದ್ದು: ಬ್ರಿಟಿಷ್ ಶಿಕ್ಷಣ ತಜ್ಞೆ ನಿತಾಶಾ ಕೌಲ್

Update: 2025-05-19 16:38 IST

ನಿತಾಶಾ ಕೌಲ್ | PC ; X \ @NitashaKaul

ಹೊಸದಿಲ್ಲಿ: ತನ್ನ ಸಾಗರೋತ್ತರ ಭಾರತೀಯ ಪ್ರಜೆ(ಒಸಿಐ) ಸ್ಥಾನಮಾನವನ್ನು ರದ್ದುಗೊಳಿಸಲಾಗಿದೆ ಎಂದು ರವಿವಾರ ಎಕ್ಸ್ ಪೋಸ್ಟ್‌ನಲ್ಲಿ ಹೇಳಿರುವ ಭಾರತೀಯ ಮೂಲದ ಬ್ರಿಟಿಷ್ ಶಿಕ್ಷಣ ತಜ್ಞೆ ನಿತಾಶಾ ಕೌಲ್, ನರೇಂದ್ರ ಮೋದಿ ಸರಕಾರದ ‘ಅಲ್ಪಸಂಖ್ಯಾತ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ನೀತಿಗಳ’ ಕುರಿತು ತನ್ನ ವಿದ್ವತ್ಪೂರ್ಣ ಕಾರ್ಯದಿಂದಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.

ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ವಿವಿಯಲ್ಲಿ ರಾಜಕೀಯ ಮತ್ತು ಅಂತರರಾಷ್ಟ್ರೀಯ ಅಧ್ಯಯನಗಳ ಪ್ರೊಫೆಸರ್ ಆಗಿರುವ ಕೌಲ್,ಇದು ಅಂತರರಾಷ್ಟ್ರೀಯ ದಮನದ ‘ಪ್ರತೀಕಾರದ ಕ್ರೂರ ಉದಾಹರಣೆ’ ಆಗಿದೆ ಎಂದು ಹೇಳಿದ್ದಾರೆ.

ಹುಟ್ಟಿನಿಂದ ಕಾಶ್ಮೀರಿ ಪಂಡಿತ ಆಗಿರುವ ಕೌಲ್ ಆರೆಸ್ಸೆಸ್ ವಿರುದ್ಧ ತನ್ನ ಟೀಕೆಗಳಿಗಾಗಿ ಹೆಸರಾಗಿದ್ದಾರೆ.

ಒಸಿಐ ಭಾರತೀಯ ಮೂಲದ ವಿದೇಶಿಯರು ಭಾರತದಲ್ಲಿ ಅನಿರ್ದಿಷ್ಟಾವಧಿಗೆ ವಾಸವಾಗಿರಲು ಮತ್ತು ಕೆಲಸ ಮಾಡಲು ಅನುಮತಿಸುವ ವಲಸೆ ಸ್ಥಾನಮಾನವಾಗಿದೆ.

ತಾನು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೇನೆ ಎಂದು ಆರೋಪಿಸಿರುವ ಕೇಂದ್ರ ಸರಕಾರದಿಂದ ಬಂದಿದೆ ಎನ್ನಲಾದ ಸಂವಹನವನ್ನು ಕೌಲ್ ತನ್ನ ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

‘ವಿವಿಧ ಅಂತರರಾಷ್ಟ್ರೀಯ ವೇದಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನಿಮ್ಮ ಹಲವಾರು ಪ್ರತಿಕೂಲ ಬರಹಗಳು,ಭಾಷಣಗಳು ಮತ್ತು ಪತ್ರಿಕೋದ್ಯಮ ಚಟುವಟಿಕೆಗಳ ಮೂಲಕ ನೀವು ನಿಯಮಿತವಾಗಿ ದೇಶದ ಸಾರ್ವಭೌಮತ್ವದ ವಿಷಯಗಳಲ್ಲಿ ಭಾರತ ಮತ್ತು ಅದರ ಸಂಸ್ಥೆಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದೀರಿ’ ಎಂದು ಸರಕಾರದ ಸಂವಹನದಲ್ಲಿ ತಿಳಿಸಲಾಗಿದೆ.

ತನ್ನ ಒಸಿಐ ಸ್ಥಾನಮಾನ ರದ್ದತಿಗೆ ಪ್ರತಿಕ್ರಿಯಿಸಿರುವ ಕೌಲ್,‘ದ್ವೇಷದ ವಿರುದ್ಧ ಮಾತನಾಡುವ ಶಿಕ್ಷಣ ತಜ್ಞರನ್ನು ಬಂಧಿಸುವುದಕ್ಕೂ ದೇಶದ ಹೊರಗಿನ ಶಿಕ್ಷಣ ತಜ್ಞರಿಗೆ ದೇಶದಲ್ಲಿ ಪ್ರವೇಶ ಮತ್ತು ಕುಟುಂಬದೊಂದಿಗೆ ಸಂಪರ್ಕವನ್ನು ನಿರಾಕರಿಸುವುದಕ್ಕೂ ನಿಕಟ ಸಂಬಂಧವಿದೆ ಎನ್ನುವುದು ಗೊತ್ತಿರಲಿ. ಒಳಗಿನಿಂದ ನಮಗೆ ಸವಾಲು ಹಾಕುವ ಮತ್ತು ಏನು ನಡೆಯುತ್ತಿದೆ ಎನ್ನುವುದನ್ನು ಹೊರಗಿನ ಪ್ರೇಕ್ಷಕರಿಗೆ ತಿಳಿಸುವ ಧೈರ್ಯ ಮಾಡಬೇಡಿ ಎಂಬ ಸಂಕೇತ ರವಾನೆಯು ಇದರ ಉದ್ದೇಶವಾಗಿದೆ’ ಎಂದು ಹೇಳಿದ್ದಾರೆ.

೨೦೧೯ರಲ್ಲಿ ಕೌಲ್ ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಳ ಬಗ್ಗೆ ವಿದೇಶ ವ್ಯವಹಾರಗಳ ಕುರಿತು ಅಮೇರಿಕದ ಸದನ ಸಮಿತಿಯ ಮುಂದೆ ಪ್ರಮುಖ ಸಾಕ್ಷಿಯಾಗಿದ್ದರು.

ಫೆ.2024ರಲ್ಲಿ ಕರ್ನಾಟಕ ಸರಕಾರದ ಆಹ್ವಾನದ ಮೇರೆಗೆ ಸಮ್ಮೇಳನವೊಂದರಲ್ಲಿ ‘ಸಂವಿಧಾನ ಮತ್ತು ಪ್ರಜಾಪ್ರಭುತ್ವ’ ಕುರಿತು ಭಾಷಣ ಮಾಡಲು ಬೆಂಗಳೂರಿಗೆ ಆಗಮಿಸಿದ್ದ ಕೌಲ್ ಅವರಿಗೆ ಕೇಂದ್ರ ಸರಕಾರದ ಆದೇಶದ ಮೇರೆಗೆ ಭಾರತದಲ್ಲಿ ಪ್ರವೇಶವನ್ನು ನಿರಾಕರಿಸಲಾಗಿತ್ತು ಮತ್ತು ವಿಮಾನ ನಿಲ್ದಾಣದಿಂದಲೇ ಗಡಿಪಾರು ಮಾಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News