ಇ-20 ಪೆಟ್ರೋಲ್ ಗೆ ಸಂಬಂಧಿಸಿದಂತೆ ನನ್ನ ವಿರುದ್ಧ ಪ್ರಾಯೋಜಿತ ರಾಜಕೀಯ ಅಭಿಯಾನ ನಡೆಯುತ್ತಿದೆ: ನಿತಿನ್ ಗಡ್ಕರಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ನಾನು ಇ-20 ಪೆಟ್ರೋಲ್ ಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿರುವ ಪ್ರಾಯೋಜಿತ ರಾಜಕೀಯ ಅಭಿಯಾನದ ಸಂತ್ರಸ್ತನಾಗಿದ್ದೇನೆ ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಆರೋಪಿಸಿದ್ದಾರೆ.
ಪೆಟ್ರೋಲ್ ನೊಂದಿಗೆ ಶೇ. 20ರಷ್ಟು ಇಥನಾಲ್ ಅನ್ನು ಮಿಶ್ರಣ ಮಾಡುವ ಕೇಂದ್ರ ಸರಕಾರದ ಉಪಕ್ರಮದ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ತೀವ್ರಗೊಂಡಿರುವ ಬೆನ್ನಿಗೇ ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ.
ದಿಲ್ಲಿಯಲ್ಲಿ ಆಯೋಜನೆಗೊಂಡಿದ್ದ 65ನೇ ಭಾರತೀಯ ಆಟೋಮೊಬೈಲ್ ತಯಾರಕರ ಸಂಘಟನೆಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ನಿತಿನ್ ಗಡ್ಕರಿ, ಸಾಂಪ್ರದಾಯಿಕ ಪೆಟ್ರೋಲ್ ನೊಂದಿಗೆ ಶೇ. 20ರಷ್ಟು ಇಥನಾಲ್ ಅನ್ನು ಮಿಶ್ರಣಗೊಳಿಸುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಉತ್ಪ್ರೇಕ್ಷಿತಗೊಳಿಸಲಾಗಿದೆ. ಈ ಇಂಧನವು ಸುರಕ್ಷಿತವಾಗಿದ್ದು, ನಿಯಂತ್ರಕರು ಹಾಗೂ ಆಟೋಮೊಬೈಲ್ ತಯಾರಕರಿಬ್ಬರಿಂದಲೂ ಅನುಮೋದನೆಗೊಂಡಿದೆ ಎಂದು ಪ್ರತಿಪಾದಿಸಿದರು.
“ಭಾರತೀಯ ಆಟೋಮೊಬೈಲ್ ತಯಾರಕರ ಸಂಘಟನೆ ಹಾಗೂ ಸುಪ್ರೀಂ ಕೋರ್ಟ್ ಇ-20 ಯೋಜನೆ ಬಗ್ಗೆ ಸ್ಪಷ್ಟನೆ ನೀಡಿವೆ. ಆದರೆ, ನನ್ನನ್ನು ರಾಜಕೀಯವಾಗಿ ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ನಡೆಯುತ್ತಿದೆ. ಅದು ಪ್ರಾಯೋಜಿತ ಅಭಿಯಾನವಾಗಿದ್ದು, ಅದಕ್ಕೆ ಗಮನ ನೀಡಬೇಡಿ” ಎಂದು ಅವರು ಕರೆ ನೀಡಿದ್ದಾರೆ.
ಇ-20 ಪೆಟ್ರೋಲ್ ಮಾರಾಟವನ್ನು ಕಡ್ಡಾಯಗೊಳಿಸಿರುವುದರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಸಚಿವ ನಿತಿನ್ ಗಡ್ಕರಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಇದರಿಂದ ವಾಹನಗಳ ಮೈಲೇಜ್ ಇಳಿಮುಖವಾಗಿದೆ ಹಾಗೂ ಅಧಿಕ ಇಥನಾಲ್ ಮಿಶ್ರಣಕ್ಕೆ ಪೂರಕವಾಗಿ ತಯಾರಿಸಿಲ್ಲದ ಹಳೆಯ ವಾಹನಗಳಿಗೆ ಹಾನಿಯಾಗುತ್ತಿದೆ ಎಂದು ವಾಹನ ಮಾಲಕರು ಆರೋಪಿಸುತ್ತಿದ್ದಾರೆ. ಉದ್ಯಮ ತಜ್ಞರು ಹಾಗೂ ಗ್ಯಾರೇಜ್ ಸೇವಾ ಸಂಸ್ಥೆಗಳೂ ಕೂಡಾ 2023ಕ್ಕೂ ಮುಂಚೆ ತಯಾರಾಗಿರುವ ವಾಹನಗಳ ಮಾಲಕರಿಂದ ಈ ಸಂಬಂಧ ದೂರುಗಳನ್ನು ಸ್ವೀಕರಿಸಿವೆ.