ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ: ಬಿಹಾರ ಸಚಿವ ಅಶೋಕ್ ಚೌಧರಿ
ನಿತೀಶ್ ಕುಮಾರ್ (Photo: PTI)
ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸುತ್ತಿದ್ದಂತೆ ಪ್ರತಿಕ್ರಿಯಿಸಿದ ಸಚಿವ ಅಶೋಕ್ ಚೌಧರಿ, ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದಾರೆ.
ನಾವು ಮೂರನೇ ಎರಡರಷ್ಟು ಬಹುಮತದಿಂದ ಗೆಲ್ಲುತ್ತೇವೆ. ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗುತ್ತಾರೆ. ಒಮ್ಮೆ ಅವರನ್ನು ಕಡೆಗಣಿಸಲು ಪ್ರಯತ್ನಿಸಿದವರು ಈಗ ಅವರ ಮೌಲ್ಯವನ್ನು ಅರಿತುಕೊಂಡಿದ್ದಾರೆ ಎಂದು ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚೌಧರಿ ಹೇಳಿದರು.
ಚುನಾವಣಾ ಆಯೋಗದ ಬಗ್ಗೆ ಟೀಕಿಸಿದ್ದ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ ಚೌಧರಿ, ಗೆಲುವು ಮತ್ತು ಸೋಲನ್ನು ನಮ್ರತೆಯಿಂದ ಸ್ವೀಕರಿಸಬೇಕು. ತೇಜಸ್ವಿ ಯಾದವ್ ಅವರನ್ನು ಕ್ರಿಮಿನಲ್‌ಗಳು ಸುತ್ತುವರಿದಿದ್ದಾರೆ. ಇದು ಓರ್ವ ವಿಜಯಶಾಲಿ ಮಾತನಾಡಬೇಕಾದ ರೀತಿಯಲ್ಲ. ಗೆಲುವು ಅಥವಾ ಸೋಲನ್ನು ಸ್ವೀಕರಿಸುವಲ್ಲಿ ನಮ್ರತೆ ಅತ್ಯಗತ್ಯ; ಅದು ಪ್ರಜಾಪ್ರಭುತ್ವದ ನೀತಿ. ತೇಜಸ್ವಿ ಯಾದವ್ ಅವರಿಗೆ ಕ್ರಿಮಿನಲ್‌ಗಳ ಬೆಂಬಲವಿದೆ. ರಿತ್ಲಾಲ್ ಯಾದವ್ ಯಾರು? ಲಾಲು ಪ್ರಸಾದ್ ಯಾದವ್ ಅವರ ಪರವಾಗಿ ಪ್ರಚಾರ ಮಾಡುತ್ತಾರೆ ಎಂದು ಹೇಳಿದ್ದಾರೆ.