"ನನ್ನ ಬಳಿ ಕ್ಯಾಬಿನೆಟ್ ಹುದ್ದೆಯೂ ಇಲ್ಲ, ಹಣವೂ ಇಲ್ಲ": ಹಿಮಾಚಲ ಪ್ರದೇಶದ ಪ್ರವಾಹ ಪೀಡಿತ ಪ್ರದೇಶಕ್ಕೆ ತೆರಳಿ ಬಿಜೆಪಿ ಸಂಸದೆ ಕಂಗನಾ ಹೇಳಿಕೆ; ವ್ಯಾಪಕ ಟೀಕೆ
ಕಂಗನಾ ರಣಾವತ್ (PTI)
ಶಿಮ್ಲಾ : ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬಿಜೆಪಿ ಸಂಸದೆ ಕಂಗನಾ ರಣಾವತ್ ನೀಡಿದ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಮಂಡಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಂಗನಾ ರಣಾವತ್, ವಿಪತ್ತು ಪರಿಹಾರ ನೀಡಲು ನನ್ನ ಬಳಿ ಯಾವುದೇ ಕ್ಯಾಬಿನೆಟ್ ಹುದ್ದೆ ಇಲ್ಲ, ನನ್ನ ಬಳಿ ಯಾವುದೇ ನಿಧಿಯೂ ಇಲ್ಲ ಎಂದು ಹೇಳಿದ್ದರು, ಈ ಹೇಳಿಕೆಗೆ ಆಡಳಿತಾರೂಢ ಕಾಂಗ್ರೆಸ್ ನಿಂದ ತೀವ್ರ ಟೀಕೆ ವ್ಯಕ್ತವಾಗಿದೆ.
ʼವಿಪತ್ತು ಪರಿಹಾರ ನೀಡಲು ನನ್ನ ಬಳಿ ಯಾವುದೇ ಕ್ಯಾಬಿನೆಟ್ ಹುದ್ದೆಯಿಲ್ಲ. ನನ್ನ ಇಬ್ಬರು ಸಹೋದರರು ಯಾವಾಗಲೂ ನನ್ನೊಂದಿಗಿರುತ್ತಾರೆ. ಅವರು ನನ್ನ ಸಚಿವ ಸಂಪುಟ. ನನ್ನ ಬಳಿ ವಿಪತ್ತು ಪರಿಹಾರಕ್ಕಾಗಿ ಯಾವುದೇ ಹಣವಿಲ್ಲ ಅಥವಾ ಯಾವುದೇ ಸಂಪುಟ ಹುದ್ದೆಯನ್ನು ಹೊಂದಿಲ್ಲ. ಸಂಸದರು ರಾಜ್ಯ ಮತ್ತು ಕೇಂದ್ರ ಸರಕಾರದ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತಾರೆ. ಕೇಂದ್ರದಿಂದ ರಾಜ್ಯಕ್ಕೆ ಯೋಜನೆಗಳನ್ನು ತಲುಪಿಸುವಲ್ಲಿ ಮತ್ತು ನಮ್ಮ ಕ್ಷೇತ್ರಗಳ ಸಮಸ್ಯೆಗಳು ಮತ್ತು ಕುಂದುಕೊರತೆಗಳನ್ನು ಕೇಂದ್ರಕ್ಕೆ ತಲುಪಿಸುವಲ್ಲಿ ನಾವು ಪ್ರಮುಖ ಪಾತ್ರ ವಹಿಸುತ್ತೇವೆʼ ಎಂದು ಅವರು ಹೇಳಿದರು.
ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರ ಹೇಳಿಕೆಗೆ ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. ಅವರು ಸಂಕಷ್ಟದಲ್ಲಿರುವ ಜನರ ಬಗ್ಗೆ ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಎಕ್ಸ್‌ನಲ್ಲಿ ಕಂಗನಾ ರಣಾವತ್ ಅವರ ವೀಡಿಯೊವನ್ನು ಹಂಚಿಕೊಂಡ ರಾಜ್ಯ ಕಾಂಗ್ರೆಸ್, ʼಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟವು ಭಾರಿ ವಿನಾಶವನ್ನುಂಟುಮಾಡಿದೆ. ಜನರು ಸಂಕಷ್ಟದಲ್ಲಿದ್ದಾರೆ. ಮಂಡಿಯ ಸಂಸದೆ ಕಂಗನಾ ಹಲವು ದಿನಗಳ ನಂತರ ಅಲ್ಲಿಗೆ ಆಗಮಿಸಿ ನಗುತ್ತಾ ನಾನು ಏನು ಮಾಡಬಹುದು, ನನಗೆ ಕ್ಯಾಬಿನೆಟ್ ಸ್ಥಾನವಿಲ್ಲ' ಎಂದು ಹೇಳಿದರು. ದಯವಿಟ್ಟು ಸ್ವಲ್ಪ ಸಹಾನುಭೂತಿ ತೋರಿಸಿ, ಕಂಗನಾ ಜಿʼ ಎಂದು ಹೇಳಿದರು.