ಅಧಿಕೃತ ಸಂವಹನಗಳಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸಲು ಯಾವುದೇ ನಿರ್ದೇಶನ ನೀಡಿಲ್ಲ: ಕೇಂದ್ರ ಸರಕಾರ
Update: 2025-08-06 12:20 IST
ನಿತ್ಯಾನಂದ ರಾಯ್ (Photo: PTI)
ಹೊಸದಿಲ್ಲಿ: ಅಧಿಕೃತ ಸಂವಹನಗಳು, ಕೇಂದ್ರ ಸೇವೆಗಳು ಅಥವಾ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸಲು ಯಾವುದೇ ನಿರ್ದೇಶನ ನೀಡಿಲ್ಲ ಎಂದು ಮಂಗಳವಾರ ಕೇಂದ್ರ ಸರಕಾರ ಲೋಕಸಭೆಗೆ ತಿಳಿಸಿದೆ.
ಹಿಂದಿಯನ್ನು ಕಡ್ಡಾಯಗೊಳಿಸಲೇನಾದರೂ ನಿರ್ದೇಶನಗಳನ್ನು ಬಿಡುಗಡೆ ಮಾಡಲಾಗಿದೆಯೆ ಎಂದು ಡಿಎಂಕೆ ಸಂಸದ ಕಲಾನಿಧಿ ವೀರಸ್ವಾಮಿ ಕೇಳಿದ ಲಿಖಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್, “ಇಲ್ಲ” ಎಂದು ಉತ್ತರಿಸಿದರು.
2014ರಿಂದ ಹಿಂದಿಯ ಪ್ರಚಾರಕ್ಕಾಗಿ ವ್ಯಯಿಸಲಾಗಿರುವ ಮೊತ್ತದ ಕುರಿತು ಡಿಎಂಕೆ ಸಂಸದ ಮಾದೇಶ್ವರನ್ ವಿ.ಎಸ್. ಕೇಳಿದ ಮತ್ತೊಂದು ಪ್ರತ್ಯೇಕ ಪ್ರಶ್ನೆಗೆ, 2014-15ರಿಂದ-15 ಹಾಗೂ 2024-25ನೇ ಸಾಲಿನ ನಡುವೆ ಅಧಿಕೃತ ಭಾಷೆ ಇಲಾಖೆಗೆ ಮಂಜೂರು ಮಾಡಲಾಗಿದ್ದ ಬಜೆಟ್ ಪೈಕಿ 736.11 ಕೋಟಿ ರೂ. ಅನ್ನು ವ್ಯಯಿಸಲಾಗಿದೆ ಎಂಬ ದತ್ತಾಂಶವನ್ನು ಸಚಿವರು ಒದಗಿಸಿದರು.