×
Ad

ನೋಟಿಸ್ ನೀಡದೇ ಬಿಹಾರದ ಮತದಾರರನ್ನು ಪಟ್ಟಿಯಿಂದ ತೆಗೆಯುವುದಿಲ್ಲ: ಸುಪ್ರೀಂ ಕೋರ್ಟ್‌ಗೆ ಚುನಾವಣಾ ಆಯೋಗ ಮಾಹಿತಿ

Update: 2025-08-10 15:08 IST

ಸಾಂದರ್ಭಿಕ ಚಿತ್ರ (Photo: PTI)

ಹೊಸದಿಲ್ಲಿ: ಚುನಾವಣಾ ಆಯೋಗ(ಇಸಿ)ವು ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್)ಗೆ ಸಂಬಂಧಿಸಿದಂತೆ ಹೊಸ ಅಫಿಡವಿಟ್‌ ಅನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದೆ. ಮತದಾರರಿಗೆ ಪೂರ್ವ ಸೂಚನೆ ನೀಡದೆ ಮತ್ತು ಅವರ ಅಹವಾಲು ಹೇಳಿಕೊಳ್ಳಲು ಅವಕಾಶ ನೀಡದೆ ಯಾವುದೇ ಹೆಸರನ್ನು ಪಟ್ಟಿಯಿಂದ ಅಳಿಸುವುದಿಲ್ಲ ಎಂದು ಆಯೋಗವು ಅಫಿಡವಿಟ್‌ನಲ್ಲಿ ತಿಳಿಸಿದೆ.

ಪರಿಷ್ಕರಣೆಗಳನ್ನು ಪ್ರಶ್ನಿಸಿರುವ ಅರ್ಜಿದಾರರು ನ್ಯಾಯಾಲಯವನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಅದು,ಈ ಪ್ರಯತ್ನಕ್ಕಾಗಿ ಭಾರೀ ದಂಡವನ್ನು ವಿಧಿಸುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದೆ. ಆದಾಗ್ಯೂ ಎಸ್‌ಐಆರ್ ಪ್ರಕ್ರಿಯೆಯಲ್ಲಿ ನೈಸರ್ಗಿಕ ನ್ಯಾಯದ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಅದು ಭರವಸೆ ನೀಡಿದೆ.

ಎಸ್‌ಐಆರ್‌ ಅನ್ನು ತೀವ್ರವಾಗಿ ವಿರೋಧಿಸಿರುವ ಪ್ರತಿಪಕ್ಷಗಳು ಇದು ಬಿಜೆಪಿ ಆಯೋಜಿಸಿರುವ ‘ಮತಗಳ್ಳತನ’ ಎಂದು ಬಣ್ಣಿಸಿವೆ.

ಅರ್ಹ ಮತದಾರರು ಪಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕೈಬಿಡಲಾಗಿರುವ ಮತದಾರರು ದಾಖಲಾತಿ ಅಗತ್ಯಗಳನ್ನು ಪೂರೈಸಲು ಮತ್ತು ತಮ್ಮ ಹೆಸರನ್ನು ಮತದಾರರ ಪಟ್ಟಿಗಳಲ್ಲಿ ಸೇರಿಸಿಕೊಳ್ಳಲು ಎರಡು ಹಂತಗಳ ಮೇಲ್ಮನವಿ ಕಾರ್ಯವಿಧಾನವು ಜಾರಿಯಲ್ಲಿದೆ ಎಂದು ಆಯೋಗವು ತಿಳಿಸಿದೆ. ಬಿಹಾರದ 7.89 ಕೋಟಿ ಮತದಾರರ ಪೈಕಿ 7.24 ಕೋಟಿಗೂ ಹೆಚ್ಚಿನ ಮತದಾರರು ತಮ್ಮ ಎಣಿಕೆ ನಮೂನೆಗಳನ್ನು ಸಲ್ಲಿಸಿದ್ದಾರೆ ಎಂದೂ ಅದು ಹೇಳಿದೆ.

ಮತದಾರರ ಪಟ್ಟಿಯಲ್ಲಿ ವ್ಯಕ್ತಿಗಳ ಹೆಸರುಗಳನ್ನು ಸೇರಿಸದಿರಲು ಕಾರಣಗಳನ್ನು ಹಂಚಿಕೊಳ್ಳುವುದನ್ನು ಅಥವಾ ಪ್ರಕಟಿಸುವುದನ್ನು ಯಾವುದೇ ಕಾನೂನು ಕಡ್ಡಾಯಗೊಳಿಸಿಲ್ಲ ಮತ್ತು ಅರ್ಜಿದಾರರು ಅಳಿಸಲಾದ ಮತದಾರರ ಹೆಸರುಗಳ ಪಟ್ಟಿಯನ್ನು ತಮ್ಮ ಹಕ್ಕಿನ ವಿಷಯವಾಗಿ ಪಡೆಯಲು ಸಾಧ್ಯವಿಲ್ಲ ಎಂದೂ ಚುನಾವಣಾ ಆಯೋಗವು ತನ್ನ ಅಫಿಡವಿಟ್‌ನಲ್ಲಿ ಸ್ಪಷ್ಟಪಡಿಸಿದೆ.

243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಈ ವರ್ಷದ ಅಕ್ಟೋಬರ್ ಅಥವಾ ನವಂಬರ್‌ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News