×
Ad

ಎಐಎಡಿಎಂಕೆ ಪಕ್ಷದ ಮೇಲೆ ಯಾರೂ ಹಿಡಿತ ಸಾಧಿಸಲಾಗದು: ಎಡಪ್ಪಾಡಿ ಪಳನಿಸ್ವಾಮಿ

Update: 2025-06-30 16:51 IST

ಎಡಪ್ಪಾಡಿ ಕೆ. ಪಳನಿಸ್ವಾಮಿ (Photo: PTI)

ಚೆನ್ನೈ: ತಮಿಳುನಾಡನ್ನು 30 ವರ್ಷಗಳಿಗೂ ಹೆಚ್ಚು ಕಾಲ ಆಳಿದ ಎಐಎಡಿಎಂಕೆ ಪಕ್ಷದ ಮೇಲೆ ಯಾವುದೇ ಪಕ್ಷವಾಗಲಿ ಅಥವಾ ಯಾರು ಎಷ್ಟೇ ದೊಡ್ಡವರಾಗಿರಲಿ, ಅದರ ಮೇಲೆ ಹಿಡಿತ ಸಾಧಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಘೋಷಿಸಿದ್ದಾರೆ.

ಬಿಜೆಪಿಯೊಂದಿಗಿನ ಚುನಾವಣಾ ಮೈತ್ರಿಯನ್ನು ಮೊದಲ ಹಂತದ ಮಾತುಕತೆ ಮಾತ್ರ ಎಂದು ಸಮರ್ಥಿಸಿಕೊಂಡಿರುವ ಪಳನಿಸ್ವಾಮಿ, ಇದೇ ವೇಳೆ, ಯಾವುದೇ ಪಕ್ಷವಾಗಲಿ ಅಥವಾ ಯಾರು ಎಷ್ಟೇ ದೊಡ್ಡವರಾಗಿರಲಿ, ಎಐಎಡಿಎಂಕೆ ಪಕ್ಷದ ಮೇಲೆ ಹಿಡಿತ ಸಾಧಿಸಲು ಸಾಧ್ಯವಿಲ್ಲ ಎಂದು ಪಕ್ಷದ ಮೇಲೆ ಬಿಜೆಪಿ ಹಿಡಿತ ಅಥವಾ ಮೇಲುಗೈ ಸಾಧಿಸುತ್ತಿದೆ ಎಂಬ ವದಂತಿಗಳಿಗೆ ತಿರುಗೇಟು ನೀಡಿದ್ದಾರೆ.

ಬಿಜೆಪಿಯೊಂದಿಗಿನ ಎಐಎಡಿಎಂಕೆ ಪಕ್ಷದ ಮೈತ್ರಿಯನ್ನು ಆಡಳಿತಾರೂಢ ಡಿಎಂಕೆ ಹಾಗೂ ವಿಡುದಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಪಕ್ಷಗಳು ತೀವ್ರವಾಗಿ ಟೀಕಿಸಿರುವ ಹಿನ್ನೆಲೆಯಲ್ಲಿ ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ.

ಇದೇ ವೇಳೆ, 2026ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷ ಬಹುಮತದೊಂದಿಗೆ ಗೆಲುವು ಸಾಧಿಸಿ ಸರಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪಳನಿಸ್ವಾಮಿ, 2026ರ ಚುನಾವಣೆಗೂ ಮುಂಚಿತವಾಗಿ ಬಲಿಷ್ಠ ಮೈತ್ರಿಕೂಟವನ್ನು ರಚಿಸಲಾಗುವುದು. ಆದರೆ, ಬಿಜೆಪಿ ಜೊತೆಗಿನ ಮೈತ್ರಿ ಸದ್ಯಕ್ಕೆ ಆರಂಭಿಕ ಹಂತದಲ್ಲಿಯೇ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಯೊಂದಿಗಿನ ಎಐಎಡಿಎಂಕೆ ಮೈತ್ರಿಯನ್ನು ಡಿಎಂಕೆ ಪಕ್ಷವೇಕೆ ಟೀಕಿಸುತ್ತಿದೆ? ಸ್ಟಾಲಿನ್ ಏಕೆ ಭಯಭೀತರಾಗಿದ್ದಾರೆ? ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುಖ್ಯಮಂತ್ರಿಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೆ? ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ, ಡಿಎಂಕೆ ಪಕ್ಷ ನಡೆಸಿರುವ ಹಗರಣಗಳನ್ನು ಹೊರಗೆಳೆಯಲಾಗುವುದು ಎಂದೂ ಅವರು ಎಚ್ಚರಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಕಮಿಷನ್ ವ್ಯವಹಾರ ಹಾಗೂ ಭ್ರಷ್ಟಾಚಾರ ಮಾಡಿರುವುದೇ ಡಿಎಂಕೆ ಸರಕಾರದ ಸಾಧನೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News