ಸೋನಮ್ ವಾಂಗ್ಚುಕ್ ಬಂಧನದ ಕಾರಣವನ್ನು ಪತ್ನಿಗೆ ಏಕೆ ತಿಳಿಸಿಲ್ಲ : ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ
ವಾಂಗ್ಚುಕ್ ಬಿಡುಗಡೆ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ
Update: 2025-10-06 11:19 IST
ಸೋನಮ್ ವಾಂಗ್ಚುಕ್ (Photo: PTI)
ಹೊಸದಿಲ್ಲಿ : ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಬಂಧಿಸಿರುವುದನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಅವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಮುಂದೂಡಿದೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್‌ವಿ ಅಂಜಾರಿಯಾ ಅವರನ್ನೊಳಗೊಂಡ ಪೀಠ ಈ ಕುರಿತ ಅರ್ಜಿಯ ವಿಚಾರಣೆಯನ್ನು ಮುಂದಿನ ಮಂಗಳವಾರಕ್ಕೆ ನಿಗದಿಪಡಿಸಿದೆ. ವಾಂಗ್ಚುಕ್ ಬಂಧನದ ಕಾರಣವನ್ನು ಅವರ ಪತ್ನಿಗೆ ಏಕೆ ತಿಳಿಸಿಲ್ಲ ಎಂದು ಕೇಂದ್ರ ಸರಕಾರಕ್ಕೆ ಪ್ರಶ್ನಿಸಿದೆ.
ಇಂದಿನ ವಿಚಾರಣೆಯ ಸಂದರ್ಭದಲ್ಲಿ ತನ್ನ ಪತಿಯ ತಕ್ಷಣದ ಬಿಡುಗಡೆ ಕೋರಿ ಆಂಗ್ಮೋ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರ, ಜಮ್ಮು ಮತ್ತು ಕಾಶ್ಮೀರ ಆಡಳಿತ ಮತ್ತು ರಾಜಸ್ಥಾನ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.