ಪಿಎಚ್‌ಡಿ ಪ್ರಸ್ತಾವದಲ್ಲಿ ಪ್ರಧಾನಿ ಕುರಿತು ನೋಮ್ ಚೋಮ್ಸ್ಕಿಟೀಕೆ ಉಲ್ಲೇಖ: ವಿದ್ಯಾರ್ಥಿಗೆ ಸೌಥ್ ಏಶ್ಯನ್ ವಿವಿ ನೋಟಿಸ್, ಸುಪರ್‌ವೈಸರ್ ರಾಜೀನಾಮೆ
PC: sau.int
ಹೊಸದಿಲ್ಲಿ: ಕಾಶ್ಮೀರದ ಜನಾಂಗಶಾಸ್ತ್ರ ಮತ್ತು ರಾಜಕೀಯ ಕುರಿತು ಪಿಎಚ್‌ಡಿ ಪ್ರಸ್ತಾವದಲ್ಲಿ ಎನ್‌ಡಿಎ ಸರಕಾರದ ಕುರಿತು ಅಮೆರಿಕದ ಭಾಷಾತಜ್ಞ ನೋಮ್ ಚೋಮ್ಸ್ಕಿಯವರು ಮಾಡಿದ್ದ ಟೀಕೆಯನ್ನು ಉಲ್ಲೇಖಿಸಿದ್ದು ದಿಲ್ಲಿಯ ಸೌಥ್ ಏಶ್ಯನ್ ವಿವಿ (ಎಸ್‌ಎಯು)ಯ ಸಂಶೋಧನಾ ವಿದ್ಯಾರ್ಥಿಗೆ ನೋಟಿಸ್ ಹೊರಡಿಸಲು ಮತ್ತು ಆತನ ಸುಪರ್‌ವೈಸರ್ ವಿರುದ್ಧ ವಿಚಾರಣೆಗೆ ಕಾರಣವಾಗಿದೆ ಎಂದು indianexpress.com ವರದಿ ಮಾಡಿದೆ.
ಸುಪರ್‌ವೈಸರ್, ಶ್ರೀಲಂಕಾ ಮೂಲದ ಸಸಾಂಕ ಪೆರೆರಾ ವಿರುದ್ಧ ವಿಚಾರಣೆ ಆರಂಭಗೊಂಡ ಬಳಿಕ ಅವರು ವಿವಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸಮಾಜಶಾಸ್ತ್ರವನ್ನು ಬೋಧಿಸುತ್ತಿದ್ದ ಅವರು ಸಮಾಜಶಾಸ್ತ್ರ ವಿಭಾಗದ ಸ್ಥಾಪಕ ಸದಸ್ಯರಾಗಿದ್ದರು.
ಈ ನಡುವೆ ಸಂಶೋಧನಾ ವಿದ್ಯಾರ್ಥಿ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ವಿವಿ ಆಡಳಿತದ ಕ್ಷಮೆ ಕೋರಿದ್ದಾರೆ.
Indian Express ಸುದ್ದಿಸಂಸ್ಥೆಯು ಪೆರೆರಾರನ್ನು ಸಂಪರ್ಕಿಸಿತ್ತಾದರೂ ಅವರು ವಿಚಾರಣೆ ಮತ್ತು ತನ್ನ ರಾಜೀನಾಮೆಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ವಿಚಾರಣೆಯನ್ನು ಆರಂಭಿಸಿದ್ದನ್ನು ಒಪ್ಪಿಕೊಂಡಿರುವ ಎಸ್‌ಎಯು, ಆದರೆ ಯಾವುದೇ ಪಿಎಚ್‌ಡಿ ಪ್ರಸ್ತಾವಯು ಪೆರೆರಾ ರಾಜೀನಾಮೆಗೆ ಕಾರಣವಾಗಿರಲಿಲ್ಲ ಎಂದು ಹೇಳಿಕೊಂಡಿದೆ.
ಪಿಎಚ್‌ಡಿ ವಿದ್ಯಾರ್ಥಿಗೆ ನೋಟಿಸ್ ಜಾರಿ ಮತ್ತು ಪೆರೆರಾ ರಾಜೀನಾಮೆಗೆ ಕಾರಣವಾಗಿದ್ದ ಪ್ರಸ್ತಾವದಲ್ಲಿ ಯಾವ ಅಂಶ ಆಕ್ಷೇಪಾರ್ಹವಾಗಿತ್ತು ಎಂಬ ಪ್ರಶ್ನೆಗೆ ವಿವಿ ಉತ್ತರಿಸಿಲ್ಲ.
ಪಿಎಚ್‌ಡಿ ವಿದ್ಯಾರ್ಥಿ ಕಳೆದ ವರ್ಷದ ನವಂಬರ್‌ನಲ್ಲಿ ತನ್ನ ಪ್ರಸ್ತಾವವನ್ನು ಸಲ್ಲಿಸಿದ್ದ ಮತ್ತು ಅದನ್ನು ಸಮಾಜ ವಿಜ್ಞಾನ ವಿಭಾಗದ ಡೀನ್‌ಗೆ ಕಳುಹಿಸುವ ಮುನ್ನ ಪೆರೆರಾ ಅದನ್ನು ಅನುಮೋದಿಸಿದ್ದರು. ಇದು ವಿವಿಯ ಪಿಎಚ್‌ಡಿ ಮಾರ್ಗಸೂಚಿಗಳಿಗೆ ಅನುಗುಣವಾಗಿಯೇ ಇತ್ತು,ಆದರೂ ಮೇ 9ರಂದು ವಿದ್ಯಾರ್ಥಿಗೆ ಶೋ-ಕಾಸ್ ನೋಟಿಸ್ ಹೊರಡಿಸಲಾಗಿತ್ತು.
ವಿದ್ಯಾರ್ಥಿಯು 2021ರಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಮತ್ತು 2022ರಲ್ಲಿ ಅಪ್‌ಲೋಡ್ ಮಾಡಿದ್ದ ಚೋಮ್ಸ್ಕಿಯವರ ಸಂದರ್ಶನದ ಖಾಸಗಿ ಯೂಟ್ಯೂಬ್ ವೀಡಿಯೊವನ್ನು ನೋಟಿಸ್‌ನಲ್ಲಿ ಬೆಟ್ಟು ಮಾಡಲಾಗಿತ್ತು. ವಿದ್ಯಾರ್ಥಿಯು ತನ್ನ ಪಿಎಚ್‌ಡಿ ಪ್ರಸ್ತಾವದಲ್ಲಿ ಉಲ್ಲೇಖಿಸಿದ್ದ ವೀಡಿಯೊದಲ್ಲಿ ಚೋಮ್ಸ್ಕಿಯವರು,ಪ್ರಧಾನಿ ನರೇಂದ್ರ ಮೋದಿಯವರು ‘ಮೂಲಭೂತವಾದಿ ಹಿಂದುತ್ವ ಸಂಪ್ರದಾಯ’ಕ್ಕೆ ಸೇರಿದ್ದು‘ಭಾರತೀಯ ಜಾತ್ಯತೀತ ಪ್ರಜಾಪ್ರಭುತ್ವ’ವನ್ನು ಹಾಳುಗೆಡವಲು ಮತ್ತು ‘ಹಿಂದು ಆಡಳಿತವನ್ನು ಹೇರಲು’ ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದರು.
ನೋಟಿಸ್‌ನಲ್ಲಿ ವಿಷಯದ ಆಯ್ಕೆಯ ಕುರಿತು ಪಿಎಚ್‌ಡಿ ವಿದಾರ್ಥಿ ಮತ್ತು ಸುಪರ್‌ವೈಸರ್‌ರಿಂದ ವಿವರಣೆಯನ್ನು ಕೇಳಲಾಗಿತ್ತು. ಮೇ 15ರಂದು ನೋಟಿಸ್‌ಗೆ ಉತ್ತರವನ್ನು ಸಲ್ಲಿಸಿದ್ದು,ಚೋಮ್ಸ್ಕಿ ವೀಡಿಯೊವನ್ನು ಶೈಕ್ಷಣಿಕ ಸಂಶೋಧನೆಯಾಗಿ ಅನುಸರಿಸಲು ತಾರ್ಕಿಕತೆ ಮತ್ತು ಕ್ಷಮೆಯಾಚನೆಯನ್ನು ಅದು ಒಳಗೊಂಡಿತ್ತು. ನಂತರ ಸದ್ರಿ ವೀಡಿಯೊವನ್ನು ತೆಗೆದುಹಾಕಲಾಗಿತ್ತು.
ಈ ನಡುವೆ,ನಿಯಮಗಳಿಗೆ ಅನುಗುಣವಾಗಿ ಪೆರೆರಾ ವಿರುದ್ಧ ವಿಚಾರಣೆಯನ್ನು ಆರಂಭಿಸಲಾಗಿದ್ದು,ಅದಿನ್ನೂ ಮುಗಿದಿಲ್ಲ ಎಂದು ವಿವಿ ತಿಳಿಸಿದೆ.
ಎಸ್‌ಎಯು ಎಂಟು ಸಾರ್ಕ್ ದೇಶಗಳಿಂದ ಪ್ರಾಯೋಜಿಸಲ್ಪಟ್ಟ ಅಂತರರಾಷ್ಟ್ರೀಯ ವಿವಿಯಾಗಿದ್ದು,ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿದೆ.