×
Ad

ʼನನ್ನ ಮಗುವಿಗೆ ಯಾರೂ ಆಮ್ಲಜನಕ ಕೊಡಲಿಲ್ಲʼ: ಉತ್ತರ ಪ್ರದೇಶದ ಸರಕಾರಿ ಆಸ್ಪತ್ರೆಯಲ್ಲಿ ವ್ಯಕ್ತಿಯೋರ್ವ ಕಣ್ಣೀರಿಟ್ಟ ವೀಡಿಯೊ ವೈರಲ್

Update: 2025-06-20 15:38 IST

Screengrab:X/@SachinGuptaUP

ಫತೇಪುರ್: ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಮಗು ಮೃತಪಟ್ಟಿದೆ ಎಂದು ತಂದೆಯೋರ್ವ ಕಣ್ಣೀರು ಹಾಕುತ್ತಿರುವ ವೀಡಿಯೊ ವೈರಲ್ ಆಗಿದೆ.

ಫತೇಪುರ್ ಜಿಲ್ಲೆಯ ಸರ್ದಾರ್ ಆಸ್ಪತ್ರೆಯಲ್ಲಿ ಬುಧವಾರ ಘಟನೆ ನಡೆದಿದೆ. ವೈರಲ್ ವೀಡಿಯೊದಲ್ಲಿ ಶಾರುಖ್ ಆಸ್ಪತ್ರೆಯ ನೆಲದ ಮೇಲೆ ಕುಳಿತು ಅಳುತ್ತಿರುವುದು ಕಂಡು ಬಂದಿದೆ. ʼ10 ನಿಮಿಷಗಳು ಕಳೆದಿವೆ, ಯಾರೂ ನನ್ನ ಮಗುವಿಗೆ ಆಮ್ಲಜನಕ ನೀಡಲಿಲ್ಲ, ಯಾರೂ ಅವನನ್ನು ಮುಟ್ಟಿ ನೋಡಿಲ್ಲʼ ಎಂದು ಶಾರುಖ್ ಆರೋಪಿಸಿದ್ದಾರೆ.

ಖಗಾ ಕೊಟ್ವಾಲಿ ಪ್ರದೇಶದ ಲಖಿಪುರ್ ಗ್ರಾಮದ ನಿವಾಸಿ ಶಾರುಖ್, ತನ್ನ ಮಗುವಿನ ಆರೋಗ್ಯ ಹದಗೆಟ್ಟ ಕಾರಣ ಮಗುವನ್ನು ಖಾಗಾದಲ್ಲಿರುವ ಹಾರ್ಡೋ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ವೈದ್ಯರು ಪರೀಕ್ಷಿಸಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ತಕ್ಷಣ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾನೆ.

ʼಮಗುವನ್ನು ಜಿಲ್ಲಾಸ್ಪತ್ರೆಗೆ ತುರ್ತಾಗಿ ಕರೆದೊಯ್ದರೂ ಯಾವುದೇ ವೈದ್ಯರು ಮಗುವನ್ನು ಪರೀಕ್ಷೆ ನಡೆಸಿಲ್ಲ. ಆಮ್ಲಜನಕ ಬೆಂಬಲ ಅಥವಾ ಯಾವುದೇ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿಲ್ಲ. ಇದರಿಂದಾಗಿ ಮಗು ಮೃತಪಟ್ಟಿದೆʼ ಎಂದು ಮಗುವಿನ ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ಆಸ್ಪತ್ರೆಯ ವಿರುದ್ಧ ವ್ಯಾಪಕ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News