ನೋಯ್ಡಾದಲ್ಲಿ ಕಾರು ಗುಂಡಿಗೆ ಬಿದ್ದು ಟೆಕ್ಕಿ ಮೃತ್ಯು: ಬಿಲ್ಡರ್ ಬಂಧನ
Photo Credit : indiatoday.in
ನೋಯ್ಡಾ, ಜ. 20: ನಿರ್ಮಾಣ ಕಾರ್ಯಕ್ಕಾಗಿ ಅಗೆಯಲಾಗಿದ್ದ, ನೀರಿನಿಂದ ತುಂಬಿದ್ದ 20 ಅಡಿ ಆಳದ ಗುಂಡಿಗೆ ಕಾರು ಸಹಿತ ಬಿದ್ದು ಸಾಫ್ಟ್‌ವೇರ್ ಇಂಜಿನಿಯರ್ ಯುವರಾಜ ಮೆಹ್ತಾ (27) ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಲ್ಡರ್ ಒಬ್ಬನನ್ನು ಬಂಧಿಸಿರುವುದಾಗಿ ನೋಯ್ಡಾ ಪೊಲೀಸರು ತಿಳಿಸಿದ್ದಾರೆ.
ವಿಷ್‌ಟೌನ್ ಪ್ಲ್ಯಾನರ್ಸ್ ಪ್ರೈ.ಲಿ. ಮಾಲೀಕರಲ್ಲೊಬ್ಬನಾದ ಅಭಯ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದು, ಇನ್ನೊಬ್ಬ ಮಾಲೀಕ ಮನೀಷ್ ಕುಮಾರ್ ಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
2021ರಲ್ಲಿ ನೋಯ್ಡಾದ ಸೆಕ್ಟರ್ 150ರಲ್ಲಿ ಮಾಲ್ ಒಂದರ ಬೇಸ್‌ಮೆಂಟ್ ನಿರ್ಮಾಣಕ್ಕಾಗಿ 20 ಅಡಿ ಆಳದ ಗುಂಡಿಯನ್ನು ಅಗೆಯಲಾಗಿತ್ತು. ಆದರೆ ನಂತರ ಅದು ನೀರಿನಿಂದ ತುಂಬಿತ್ತು.
ಯುವರಾಜ ಸಾವಿನ ಬಳಿಕ ಅವರ ತಂದೆಯ ದೂರಿನ ಮೇರೆಗೆ ವಿಷ್‌ಟೌನ್ ಪ್ಲ್ಯಾನರ್ಸ್ ಮತ್ತು ಲೋಟಸ್ ಗ್ರೀನ್ಸ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ತಾನು 2019–20ರಲ್ಲಿ ನೋಯ್ಡಾ ಪ್ರಾಧಿಕಾರದ ಅನುಮತಿಯೊಂದಿಗೆ ಯೋಜನೆಯನ್ನು ವಿಷ್‌ಟೌನ್ ಪ್ಲ್ಯಾನರ್ಸ್ ಮತ್ತು ಗೃಹಪ್ರವೇಶ ಗ್ರೂಪ್‌ಗೆ ಮಾರಾಟ ಮಾಡಿದ್ದಾಗಿ ಲೋಟಸ್ ಗ್ರೀನ್ಸ್ ನಂತರ ಹೇಳಿಕೊಂಡಿತ್ತು.
ಸೋಮವಾರ ಉತ್ತರ ಪ್ರದೇಶ ಸರ್ಕಾರವು ನೋಯ್ಡಾ ಪ್ರಾಧಿಕಾರದ ಸಿಇಒ ಲೋಕೇಶ್ ಎಂ. ಅವರನ್ನು ಹುದ್ದೆಯಿಂದ ವಜಾಗೊಳಿಸಿತ್ತು ಹಾಗೂ ಯುವರಾಜ ಸಾವಿನ ಕುರಿತು ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಲು ಆದೇಶಿಸಿತ್ತು.
ರವಿವಾರ ಲೋಕೇಶ್ ಅವರು ಜ್ಯೂನಿಯರ್ ಇಂಜಿನಿಯರ್ ಒಬ್ಬರನ್ನು ವಜಾಗೊಳಿಸಿದ್ದರು. ಜೊತೆಗೆ ಸೆಕ್ಟರ್ 150ರಲ್ಲಿ ರಸ್ತೆ ಮತ್ತು ಸಂಚಾರ ಸಂಬಂಧಿತ ಕೆಲಸಗಳ ಮೇಲ್ವಿಚಾರಣೆಯ ಹೊಣೆಗಾರಿಕೆ ಹೊಂದಿದ್ದ ಇತರ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್‌ಗಳನ್ನು ಜಾರಿಗೊಳಿಸಿದ್ದರು.
ಶನಿವಾರ ಬೆಳಗಿನ ಜಾವ ಮನೆಗೆ ಮರಳುತ್ತಿದ್ದ ಯುವರಾಜ ಚಲಾಯಿಸುತ್ತಿದ್ದ ಕಾರು ದಟ್ಟ ಮಂಜಿನಿಂದಾಗಿ ರಸ್ತೆಬದಿಯ ತಡೆಗೋಡೆಗೆ ಢಿಕ್ಕಿ ಹೊಡೆದು ನೀರಿನಿಂದ ತುಂಬಿದ್ದ ಗುಂಡಿಯಲ್ಲಿ ಬಿದ್ದಿತ್ತು. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದರೂ, ಸುಮಾರು 90 ನಿಮಿಷಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಯುವರಾಜನನ್ನು ರಕ್ಷಿಸಲು ಸಾಧ್ಯವಾಗದೆ ಅವರು ಮೃತಪಟ್ಟಿದ್ದರು.