ಉತ್ತರ ಭಾರತವನ್ನು ಆವರಿಸಿದ ದಟ್ಟ ಮಂಜು, ಶೀತ ಗಾಳಿ, ಹೊಗೆ
ಸಾಂದರ್ಭಿಕ ಚಿತ್ರ | Photo Credit :PTI
ಹೊಸದಿಲ್ಲಿ, ಡಿ. 28: ದಟ್ಟ ಮಂಜು ಹಾಗೂ ಶೀತ ಗಾಳಿಯಿಂದಾಗಿ ಉತ್ತರಭಾರತದಾದ್ಯಂತ ದೈನಂದಿನ ಜನಜೀವನ ರವಿವಾರ ಅಸ್ತವ್ಯಸ್ತಗೊಂಡಿದೆ. ದಿಲ್ಲಿಯಲ್ಲಿ ತಾಪಮಾನ 9 ಡಿಗ್ರಿ ಸೆಲ್ಸಿಯಸ್ ಗೆ ಇಳಿಕೆಯಾಗಿದ್ದು, ದಟ್ಟ ಹೊಗೆಯಿಂದಾಗಿ ದೃಗ್ಗೋಚರತೆ ಕಡಿಮೆಯಾಗಿದೆ.
ಹವಾಮಾನ ವೈಪರಿತ್ಯದ ಹೊರತಾಗಿಯೂ ಇಂದಿರಾ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ರಾತ್ರಿ 8 ಗಂಟೆ ವರೆಗೆ ವಿಮಾನ ಯಾನ ಸೇವೆಗಳಿಗೆ ಯಾವುದೇ ಅಡಚಣೆ ಉಂಟಾಗಿಲ್ಲ. ಕರ್ನಾಲ್ (ಹರ್ಯಾಣ) ಹಾಗೂ ಮೊರದಾಬಾದ್ (ಉತ್ತರಪ್ರದೇಶ) ಸೇರಿದಂತೆ ಇತರ ನಗರಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಕಂಡು ಬಂದಿದ್ದು, ತಾಪಮಾನ ಸುಮಾರು 9 ಡಿಗ್ರಿ ಸೆಲ್ಸಿಯಸ್ ಗೆ ಇಳಿಕೆಯಾಗಿದೆ.
ಮೊರದಾಬಾದ್‌ನಲ್ಲಿ ಭಾರತದ ಹವಮಾನ ಇಲಾಖೆ (ಐಎಂಡಿ) ಆರೆಂಜ್ ಅಲರ್ಟ್ ಘೋಷಿಸಿದೆ. ಆಗ್ರಾದ ತಾಜ್ ಮಹಲ್ ನಲ್ಲಿ ದಟ್ಟ ಮಂಜು ಆವರಿಸಿದೆ. ಕಾನ್ಪುರದಲ್ಲಿ ಜನರು ಬೆಚ್ಚಗಿರಲು ಅಗ್ನಿಷ್ಟಿಕೆ ಮುಂದೆ ಒಟ್ಟು ಸೇರಿದರು. ಅಸ್ಸಾಂನ ಗುವಾಹಟಿಯಲ್ಲಿ ಕನಿಷ್ಠ ತಾಪಾಮಾನ 15 ಡಿಗ್ರಿ ಸೆಲ್ಸಿಯಸ್ ಗೆ ಇಳಿಕೆಯಾಗಿದೆ. ಅಲ್ಲಿ ಮಂಜು ಹಾಗೂ ಶೀತ ಗಾಳಿ ಪರಿಸ್ಥಿತಿ ಕಂಡು ಬಂದಿದೆ.
ದಿಲ್ಲಿಯಲ್ಲಿ ವಾಯು ಗುಣಮಟ್ಟ ಹದಗೆಟ್ಟಿದೆ. ಅಲ್ಲಿ ವಾಯು ಗುಣಮಟ್ಟ ಸೂಚ್ಯಾಂಕ (AQI)391ಕ್ಕೆ ತಲುಪಿದ್ದು, ಗಂಭೀರ ವರ್ಗ ಪ್ರವೇಶಿಸಿದೆ. ಕೆಲವು ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಾಂಕ (AQI) 400 ದಾಟಿದೆ. ವಾಯು ಗುಣಮಟ್ಟ ಸೂಚ್ಯಾಂಕ (AQI) ಆನಂದ್ ವಿಹಾರ್‌ನಲ್ಲಿ 445, ಪತ್ತರ್ ಗಂಜ್ ನಲ್ಲಿ 425, ನೆಹರೂ ನಗರದಲ್ಲಿ 433, ಶಾದಿಪುರದಲ್ಲಿ 445, ಮುಂಡ್ಕಾದಲ್ಲಿ 413 ಹಾಗೂ ಐಜಿಐ ವಿಮಾನ ನಿಲ್ದಾಣದಲ್ಲಿ 320 ದಾಖಲಾಗಿದೆ.
ಅಧಿಕಾರಿಗಳು ಶ್ರೇಣೀಕೃತ ಸ್ಪಂದನಾ ಕ್ರಿಯಾ ಯೋಜನೆ ಅಡಿ ಹಂತ 4ರ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಈ ಕ್ರಮಗಳು ನಿರ್ಮಾಣ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ನಿರ್ಬಂಧ, ‘‘ಪಿಯುಸಿ ಇಲ್ಲ’’, ‘‘ಇಂಧನ ಇಲ್ಲ’’ ನಿಯಮಗಳನ್ನು ಒಳಗೊಂಡಿವೆ.