×
Ad

ಇರಾನ್ ವಿರುದ್ಧದ ಇಸ್ರೇಲ್‌ ನ ಅಪ್ರಚೋದಿತ ದಾಳಿ ಬಗ್ಗೆ ಭಾರತದ ಮೌನವು ಕಳವಳಕಾರಿಯಾಗಿದೆ: ಸೋನಿಯಾ ಗಾಂಧಿ

Update: 2025-06-21 13:29 IST

ಸೋನಿಯಾ ಗಾಂಧಿ (Photo: PTI)

ಹೊಸದಿಲ್ಲಿ: ಗಾಝಾ ಮತ್ತು ಇರಾನ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿ ಬಗ್ಗೆ ಭಾರತದ ಮೌನವು ತನ್ನ ಧ್ವನಿಯ ನಷ್ಟ ಮಾತ್ರವಲ್ಲ, ಮೌಲ್ಯಗಳ ಶರಣಾಗತಿಯೂ ಆಗಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಟೀಕಿಸಿದರು.

"ಭಾರತದ ಧ್ವನಿ ಕೇಳಲು ಇನ್ನೂ ತಡವಾಗಿಲ್ಲ" ಎಂಬ ಲೇಖನದಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಿದ ಸೋನಿಯಾ ಗಾಂಧಿ, ಮೋದಿ ಸರ್ಕಾರವು ಇಸ್ರೇಲ್ ಜೊತೆಗೆ ಸ್ವತಂತ್ರ ಫೆಲೆಸ್ತೀನ್ ಅನ್ನು ಕಲ್ಪಿಸಿಕೊಳ್ಳುವ ಶಾಂತಿಯುತ ದ್ವಿರಾಷ್ಟ್ರ ಪರಿಹಾರದ ಕುರಿತು ಭಾರತದ ದೀರ್ಘಕಾಲೀನ ಬದ್ಧತೆಯನ್ನು ಕೈಬಿಟ್ಟಿದೆ ಎಂದು ಆರೋಪಿಸಿದರು.

ಅಮೆರಿಕದ ಅಂತ್ಯವಿಲ್ಲದ ಯುದ್ಧಗಳ ವಿರುದ್ಧ ಮಾತನಾಡಿದ ಸೋನಿಯಾ ಗಾಂಧಿ, ಪಶ್ಚಿಮ ಏಷ್ಯಾದಲ್ಲಿ ʼವಿನಾಶಕಾರಿ ಮಾರ್ಗʼ ಅನುಸರಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೂಡಾ ಲೇಖನದಲ್ಲಿ ಟೀಕಿಸಿದ್ದಾರೆ.

"ಗಾಝಾದಲ್ಲಿನ ವಿನಾಶದ ಬಗ್ಗೆ ಮತ್ತು ಈಗ ಇರಾನ್ ವಿರುದ್ಧದ ಅಪ್ರಚೋದಿತ ದಾಳಿ ಬಗ್ಗೆ ಹೊಸದಿಲ್ಲಿಯ ಮೌನವು ನಮ್ಮ ನೈತಿಕ ಮತ್ತು ರಾಜತಾಂತ್ರಿಕ ಸಂಪ್ರದಾಯಗಳಿಂದ ಕಳವಳಕಾರಿ ನಿರ್ಗಮನವನ್ನು ಪ್ರತಿಬಿಂಬಿಸುತ್ತದೆ. ಇದು ಕೇವಲ ಧ್ವನಿಯ ನಷ್ಟ ಮಾತ್ರವಲ್ಲ, ಬದಲಾಗಿ, ಮೌಲ್ಯಗಳ ಶರಣಾಗತಿಯನ್ನು ಸಹ ಪ್ರತಿನಿಧಿಸುತ್ತದೆ" ಎಂದು 'ದಿ ಹಿಂದೂ' ದಲ್ಲಿನ ತಮ್ಮ ಲೇಖನದಲ್ಲಿ ಸೋನಿಯಾ ಗಾಂಧಿ ಹೇಳಿದ್ದಾರೆ.

"ಇನ್ನೂ ತಡವಾಗಿಲ್ಲ. ಭಾರತ ಸ್ಪಷ್ಟವಾಗಿ ಮಾತನಾಡಬೇಕು, ಜವಾಬ್ದಾರಿಯುತವಾಗಿ ವರ್ತಿಸಬೇಕು. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯನ್ನು ಶಮನಗೊಳಿಸಲು ಮತ್ತು ಸಂವಾದಕ್ಕೆ ಮರಳಲು ಉತ್ತೇಜಿಸಲು ಲಭ್ಯವಿರುವ ಪ್ರತಿಯೊಂದು ರಾಜತಾಂತ್ರಿಕ ಮಾರ್ಗವನ್ನು ಬಳಸಬೇಕು" ಎಂದು ಸೋನಿಯಾ ಗಾಂಧಿ ಪ್ರತಿಪಾದಿಸಿದ್ದಾರೆ.

ಈ ಮಾನವೀಯ ದುರಂತದ ಸಂದರ್ಭದಲ್ಲಿ, "ನರೇಂದ್ರ ಮೋದಿ ಸರ್ಕಾರವು ಶಾಂತಿಯುತ ದ್ವಿ-ರಾಷ್ಟ್ರ ಪರಿಹಾರದ ಕುರಿತಂತೆ ಭಾರತದ ದೀರ್ಘಕಾಲೀನ ಮತ್ತು ತತ್ವಬದ್ಧ ಬದ್ಧತೆಯನ್ನು ಬಹುತೇಕ ಕೈಬಿಟ್ಟಿದೆ, ದ್ವಿ-ರಾಷ್ಟ್ರ ಪರಿಹಾರವು ಸಾರ್ವಭೌಮ, ಸ್ವತಂತ್ರ ಫೆಲೆಸ್ತೀನ್ ಅನ್ನು ಇಸ್ರೇಲ್ ಜೊತೆ ಪರಸ್ಪರ ಭದ್ರತೆ ಮತ್ತು ಘನತೆಯಿಂದ ಬದುಕುವ ಕಲ್ಪನೆಯನ್ನು ಹೊಂದಿದೆ" ಎಂದು ಅವರು ಹೇಳಿದರು.

ಜೂನ್ 13, 2025 ರಂದು, ಇಸ್ರೇಲ್ ಇರಾನ್ ಮತ್ತು ಅದರ ಸಾರ್ವಭೌಮತ್ವದ ವಿರುದ್ಧ ತೊಂದರೆ ಕೊಡುವ ಮತ್ತು ಕಾನೂನುಬಾಹಿರ ದಾಳಿಯನ್ನು ಪ್ರಾರಂಭಿಸಿದ ಬಳಿಕ ಏಕಪಕ್ಷೀಯ ಮಿಲಿಟರಿಸಂನ ಅಪಾಯಕಾರಿ ಪರಿಣಾಮಗಳನ್ನು ಜಗತ್ತು ಮತ್ತೊಮ್ಮೆ ಕಂಡಿದೆ ಎಂದು ಸೋನಿಯಾ ಗಾಂಧಿ ಬೊಟ್ಟು ಮಾಡಿದ್ದಾರೆ.

ಇರಾನ್ ನೆಲದಲ್ಲಿ ನಡೆದ ಈ ಬಾಂಬ್ ದಾಳಿಗಳು ಮತ್ತು ಹತ್ಯೆಗಳನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಖಂಡಿಸಿದೆ ಎಂದು ಅವರು ಹೇಳಿದರು.

"ಗಾಝಾದಲ್ಲಿ ಅದರ ಕ್ರೂರ ಕಾರ್ಯಾಚರಣೆ ಸೇರಿದಂತೆ ಇಸ್ರೇಲ್‌ನ ಇತ್ತೀಚಿನ ಹಲವು ಕ್ರಮಗಳಂತೆ, ಈ ಕಾರ್ಯಾಚರಣೆಯನ್ನು ನಾಗರಿಕ ಜೀವನ ಮತ್ತು ಪ್ರಾದೇಶಿಕ ಸ್ಥಿರತೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ನಡೆಸಲಾಗಿದೆ. ಈ ಕ್ರಮಗಳು ಅಸ್ಥಿರತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ಮತ್ತಷ್ಟು ಸಂಘರ್ಷದ ಬೀಜಗಳನ್ನು ಬಿತ್ತುತ್ತದೆ" ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News