ಪಂಜಾಬ್ | ಯೂಟ್ಯೂಬರ್ ಹತ್ಯೆ: ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡ ಅಕಾಲ್ ತಖ್ತ್ ಮುಖ್ಯ ಗ್ರಂಥಿ!
PC ; indiatoday.in
ಚಂಡೀಗಢ: ಅಶ್ಲೀಲ ದೃಶ್ಯಗಳಲ್ಲಿ ಪಾಲ್ಗೊಂಡು ಧರ್ಮಕ್ಕೆ ಅಪಚಾರವೆಸಗುವವರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಮಂಗಳವಾರ ಅಕಾಲ್ ತಖ್ತ್ ಸಾಹಿಬ್‌ನ ಮುಖ್ಯ ಗ್ರಂಥಿ ಗ್ಯಾನಿ ಮಲ್ಕಿತ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆ ಮೂಲಕ, ಜೂನ್ 11ರಂದು ಭಟಿಂಡಾದ ವೈದ್ಯಕೀಯ ಕಾಲೇಜಿನ ಕ್ಯಾಂಪಸ್‌ನಲ್ಲಿ ನಿಂತಿದ್ದ ಕಾರೊಂದರಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದ 27 ವರ್ಷದ ಕಮಲ್ ಕೌರ್ ಅಥವಾ ಕ್ವೀನ್ ಎಂದೇ ಹೆಸರುವಾಸಿಯಾಗಿದ್ದ 27 ವರ್ಷದ ಜನಪ್ರಿಯ ಯೂಟ್ಯೂಬರ್ ಕಾಂಚನ್ ಕುಮಾರಿಯ ಹತ್ಯೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಗ್ಯಾನಿ ಮಲ್ಕಿತ್ ಸಿಂಗ್, "ಹಿಂದೂ, ಸಿಖ್ ಅಥವಾ ಮುಸ್ಲಿಂ ಯಾರೇ ಆಗಿದ್ದರೂ, ಧರ್ಮಾತೀತವಾಗಿ ಅಶ್ಲೀಲತೆ ಹಾಗೂ ಅಂತಹ ಗೀತೆಗಳಿಂದ ದೂರ ಉಳಿಯಬೇಕು ಎಂದು ಗುರುಗಳು ಸಂದೇಶ ನೀಡಿದ್ದಾರೆ. ಆದರೆ, ಕೆಲವರು ಇಂತಹ ಕೆಲಸಗಳಲ್ಲಿ ತೊಡಗಿದ್ದಾರೆ. ತಮ್ಮ ಹೆಸರುಗಳನ್ನು ಬದಲಿಸಿಕೊಂಡು ಸಿಖ್ ಸಮುದಾಯಕ್ಕೆ ಅಪಚಾರವೆಸಗುವುದು ನಿಲ್ಲಲೇಬೇಕಿರುವುದರಿಂದ, ಇದರಲ್ಲಿ ಯಾವುದೇ ತಪ್ಪಿಲ್ಲ" ಎಂದು ಪರೋಕ್ಷವಾಗಿ ಕಾಂಚನ್ ಕುಮಾರಿಯ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಯುವಜನತೆ ಇಂತಹ ಅಶ್ಲೀಲ ತುಣುಕುಗಳನ್ನು ಆಲಿಸುವುದರಿಂದ ದೂರ ಉಳಿಯಬೇಕು ಎಂದು ಆಗ್ರಹಿಸಿದ ಅವರು, ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ ಎಂಬುದರತ್ತ ಬೊಟ್ಟು ಮಾಡಿದ್ದಾರೆ.
ಲೂಧಿಯಾನಾ ನಿವಾಸಿಯಾದ ಕಾಂಚನ್ ಕುಮಾರಿ ಇನ್ಸ್ಟಾಗ್ರಾಮ್ ನಲ್ಲಿ 3.83 ಲಕ್ಷ ಫಾಲೋವರ್ಸ್ ಗಳನ್ನು ಹೊಂದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ನಿರ್ಭಿಡೆ ಹಾಗೂ ಪದೇ ಪದೇ ವಿವಾದಾತ್ಮಕ ತುಣುಕುಗಳನ್ನು ಹಂಚಿಕೊಳ್ಳುವುದರಿಂದ ಹೆಸರುವಾಸಿಯಾಗಿದ್ದರು. ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಅವರು ಜನಪ್ರಿಯರಾಗಿದ್ದರು ಹಾಗೂ ಹಲವಾರು ಆನ್‌ಲೈನ್ ವಿವಾದಗಳಿಗೆ ಸಿಲುಕಿದ್ದರು.
ಅದೇಶ್ ವೈದ್ಯಕೀಯ ಕಾಲೇಜು ಕ್ಯಾಂಪಸ್‌ನಲ್ಲಿ ನಿಲ್ಲಿಸಲಾಗಿದ್ದ ಕಾರೊಂದರಿಂದ ದುರ್ವಾಸನೆ ಬರುತ್ತಿದೆ ಎಂದು ಸ್ಥಳೀಯರು ದೂರು ನೀಡಿದ ನಂತರ, ಅವರ ದೇಹವು ತೀವ್ರ ಕೊಳೆತ ಸ್ಥಿತಿಯಲ್ಲಿ ಅದರಲ್ಲಿ ಪತ್ತೆಯಾಗಿತ್ತು. ಪ್ರಾಥಮಿಕ ತನಿಖೆಯ ಪ್ರಕಾರ, ಈ ಅಪರಾಧ ಕೃತ್ಯವು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿಲ್ಲ ಹಾಗೂ ಕಾಂಚನ್ ಕುಮಾರಿಯನ್ನು ಬೇರೆಲ್ಲೊ ಹತ್ಯೆಗೈಯ್ಯಲಾಗಿದೆ ಎಂದು ಶಂಕಿಸಲಾಗಿದೆ. ಆಕೆಯನ್ನು ಉಸಿರುಗಟ್ಟಿಸಿ, ನಂತರ ಆಕೆಯ ಮೃತ ದೇಹವನ್ನು ಕಾರೊಳಗೆ ಹಾಕಿರುವ ಸಾಧ್ಯತೆ ಇದ್ದು, ಬಳಿಕ, ಅದನ್ನು ವಿಶ್ವವಿದ್ಯಾಲಯದ ನಿಲುಗಡೆ ತಾಣದಲ್ಲಿ ಅನಾಥವಾಗಿ ಬಿಟ್ಟು ಪರಾರಿಯಾಗಿರಬಹುದು ಎಂದೂ ಸಂಶಯಿಸಲಾಗಿದೆ. ಆದರೆ, ಈ ಕಾರಿನ ನಂಬರ್ ಪ್ಲೇಟ್ ನಕಲಿ ಎಂಬ ಸಂಗತಿ ತನಿಖೆಯ ವೇಳೆ ಪತ್ತೆಯಾಗಿದೆ.
ಈ ಸಂಬಂಧ, ಕಳೆದ ವರ್ಷ ಕೆನಡಾದಲ್ಲಿ ನೆಲೆಸಿರುವ ಘೋಷಿತ ಭಯೋತ್ಪಾದಕ ಅರ್ಶ್ ದಲ್ಲಾರಿಂದ ಕಾಂಚನ್ ಕುಮಾರಿ ಸ್ವೀಕರಿಸಿದ್ದ ಬೆದರಿಕೆ ಕರೆಯೊಂದಿಗೆ ಈ ಕೃತ್ಯಕ್ಕೆ ಇರಬಹುದಾದ ಸಂಬಂಧದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆನ್‌ಲೈನ್‌ನಲ್ಲಿ ಅಶ್ಲೀಲ ವೀಡಿಯೊಗಳನ್ನು ಪೋಸ್ಟ್ ಮಾಡದಂತೆ ಆತ ಕಾಂಚನ್ ಕುಮಾರಿಗೆ ಎಚ್ಚರಿಕೆ ನೀಡಿದ್ದ ಎಂದು ವರದಿಯಾಗಿದೆ.
"ಈ ಬೆದರಿಕೆ ಕರೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇನ್ನಿತರ ಎಲ್ಲ ಆಯಾಮಗಳನ್ನೂ ಪರಿಶೀಲಿಸಲಾಗುತ್ತಿದೆ. ನಾವು ಎಲ್ಲ ಸಂಭವನೀಯ ಸುಳಿವುಗಳನ್ನು ಪರಿಶೀಲಿಸುತ್ತಿದ್ದು, ಈ ಹಂತದಲ್ಲಿ ಏನನ್ನೂ ದೃಢಪಡಿಸಲು ಸಾಧ್ಯವಿಲ್ಲ" ಎಂದು ಭಟಿಂಡಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಮ್ನೀತ್ ಕೊಂಡಲ್ ತಿಳಿಸಿದ್ದಾರೆ.
ನಾನು ಭಟಿಂಡಾಗೆ ತೆರಳುತ್ತಿದ್ದೇನೆ ಎಂದು ಜೂನ್ 9ರಂದು ಕಾಂಚನ್ ಕುಮಾರಿ ತನ್ನ ಪೋಷಕರಿಗೆ ತಿಳಿಸಿದ್ದಳು. ಆದರೆ, ಆಕೆ ಭಟಿಂಡಾಗೆ ಆಗಮಿಸುತ್ತಿದ್ದಂತೆಯೇ, ಆಕೆ ತನ್ನ ಪೋಷಕರಿಂದ ಸಂಪರ್ಕ ಕಳೆದುಕೊಂಡಿದ್ದರು. ಪ್ರಚಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕಾಂಚನ್ ಕುಮಾರಿ ತಮ್ಮ ಮನೆಯಿಂದ ಹೊರಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿ ಅಮೃತ್‌ಪಾಲ್ ಸಿಂಗ್ ಮೆಹ್ರೋನ್, ಈ ಘಟನೆಯ ಬೆನ್ನಿಗೇ, ಯುಎಇಗೆ ಪರಾರಿಯಾಗಿದ್ದಾನೆ. ಇನ್ನಿಬ್ಬರು ಆರೋಪಿಗಳಾದ ಮೋಗಾ ನಿವಾಸಿ ಜಸ್ಪ್ರೀತ್ ಸಿಂಗ್ (32) ಹಾಗೂ ತರ್ನ್ ತರ್ನ್ ನಿವಾಸಿಯಾದ ನಿಮ್ರಜಿತ್ ಸಿಂಗ್ (21)ರನ್ನು ಜೂನ್ 13ರಂದು ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ಭಾಗಿಯಾಗಿದ್ದಾರೆ ಎಂಬ ಸಂಗತಿ ಮತ್ತಷ್ಟು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಇಬ್ಬರು ಆರೋಪಿಗಳು ಪ್ರಮುಖ ಆರೋಪಿ ಅಮೃತ್‌ಪಾಲ್ ಸಿಂಗ್ ಮೆಹ್ರೋನ್ ಸಹಚರರಾಗಿದ್ದು, ಈ ಪೈಕಿ ಓರ್ವ ಆರೋಪಿಯನ್ನು ರಂಜಿತ್ ಸಿಂಗ್ ಎಂದು ಗುರುತಿಸಲಾಗಿದೆ. ಇಬ್ಬರೂ ಆರೋಪಿಗಳ ಹೆಸರನ್ನು ಎಫ್ಐಆರ್‌ನಲ್ಲಿ ನಮೂದಿಸಲಾಗಿದ್ದು, ಅವರನ್ನು ಬಂಧಿಸುವ ಪ್ರಯತ್ನಗಳೂ ಮುಂದುವರಿದಿವೆ ಎಂದು ಕೊಂಡಲ್ ತಿಳಿಸಿದ್ದಾರೆ.