ನ್ಯಾ. ಶೇಖರ್ ಯಾದವ್ ವಿರುದ್ಧದ ನೋಟಿಸ್ ಇನ್ನೂ ಬಾಕಿ: ತಾವು ಸಹಿ ಹಾಕಿದ್ದನ್ನು ದೃಢಪಡಿಸಿದ 50 ಸಂಸದರು
ನ್ಯಾ. ಶೇಖರ್ ಯಾದವ್ (Photo: X/@barandbench)
ಹೊಸದಿಲ್ಲಿ: ಕಳೆದ ವರ್ಷ ವಿಶ್ವ ಹಿಂದೂ ಪರಿಷತ್ ಅಲಹಾಬಾದ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಭಾಷಣ ಮಾಡಿದ್ದಕ್ಕಾಗಿ ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಶೇಖರ್ ಯಾದವ ಅವರ ವಿರುದ್ಧ 54 ರಾಜ್ಯಸಭಾ ಸದಸ್ಯರು ಸಲ್ಲಿಸಿರುವ ಮಹಾಭಿಯೋಗ ನೋಟಿಸ್‌ಗೆ ಕನಿಷ್ಠ 50 ಸಂಸದರು ಸಹಿ ಮಾಡಿರುವುದು ದೃಢಪಟ್ಟಿದೆ. ನೋಟಿಸ್ ಕುರಿತು ಮುಂದಿನ ಕ್ರಮವನ್ನು ತೆಗೆದುಕೊಳ್ಳಲು ಕನಿಷ್ಠ 50 ಸಂಸದರು ಸಹಿ ಮಾಡುವುದು ಅಗತ್ಯವಾಗಿದೆ.
ರಾಜ್ಯಸಭಾ ಮೂಲಗಳ ಪ್ರಕಾರ ಈ ವರ್ಷದ ಮಾರ್ಚ್ ಮತ್ತು ಮೇ ತಿಂಗಳಿನಲ್ಲಿ ರಾಜ್ಯಸಭಾ ಸಚಿವಾಲಯವು ಇಮೇಲ್‌ಗಳು ಮತ್ತು ಕರೆಗಳ ಮೂಲಕ ಪ್ರತಿಕ್ರಿಯೆಗಳನ್ನು ಕೋರಿದ ಬಳಿಕ ನೋಟಿಸ್‌ಗೆ ಸಹಿ ಹಾಕಿದವರ ಪೈಕಿ ಈವರೆಗೆ ಕೇವಲ 44 ಸಂಸದರು ತಾವು ಸಹಿ ಹಾಕಿರುವುದನ್ನು ದೃಢ ಪಡಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಉಳಿದ ಸಂಸದರ ಪೈಕಿ ಆರು ಜನರು ತಾವು ನೋಟಿಸ್‌ಗೆ ಸಹಿ ಹಾಕಿರುವುದಾಗಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಸುದ್ದಿಸಂಸ್ಥೆಯು ಪ್ರತಿಕ್ರಿಯೆಗಾಗಿ ಮೂವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಮತ್ತು ಇನ್ನೋರ್ವ ಸಂಸದ ಆಪ್‌ನ ಸಂಜೀವ ಅರೋರಾ ಅವರು ತಾನು ಲೂಧಿಯಾನಾ ಪಶ್ಚಿಮ ಉಪಚುನಾವಣೆಯಲ್ಲಿ ವ್ಯಸ್ತನಾಗಿರುವುದಾಗಿ ತಿಳಿಸಿದ್ದಾರೆ.
ನ್ಯಾಯಾಧೀಶರ (ವಿಚಾರಣಾ) ಕಾಯ್ದೆ,1968ರಡಿ ಸಲ್ಲಿಸಲಾಗಿರುವ ನೋಟಿಸ್ ಬಗ್ಗೆ ನಿರ್ಧರಿಸಲು ಯಾವುದೇ ಕಾಲಮಿತಿಯಿಲ್ಲದ ಕಾರಣ ಉಪರಾಷ್ಟ್ರಪತಿ ಹಾಗೂ ಸಭಾಪತಿ ಜಗದೀಪ ಧನ್ಕರ್ ಅವರು ನೋಟಿಸನ್ನು ತಿರಸ್ಕರಿಸಿಲ್ಲ ಎಂದು ಬಲ್ಲ ಮೂಲಗಳು ತಿಳಿಸಿವೆ.
‘ಸಭಾಪತಿಗಳಿಗೆ ಸಹಿಗಳನ್ನು ದೃಢಪಡಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅವರು ನೋಟಿಸನ್ನು ತಿರಸ್ಕರಿಸಬೇಕು,ಆಗ ನಾವು ನ್ಯಾಯಾಲಯದ ಮೆಟ್ಟಿಲೇರಲು ಸಾಧ್ಯವಾಗುತ್ತದೆ ’ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಾಜ್ಯಸಭಾ ಸದಸ್ಯ ಕಪಿಲ ಸಿಬಲ್ ತಿಳಿಸಿದರು.
ಕಳೆದ ವರ್ಷದ ಡಿ.8ರಂದು ನಡೆದಿದ್ದ ವಿಹಿಂಪ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನ್ಯಾ.ಯಾದವ,‘ಇದು ಹಿಂದುಸ್ಥಾನ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ ಮತ್ತು ದೇಶವು ಹಿಂದುಸ್ಥಾನದಲ್ಲಿ ವಾಸವಿರುವ ಬಹುಸಂಖ್ಯಾತರ ಇಷ್ಟದಂತೆ ನಡೆಯುತ್ತದೆ ಎಂದು ಹೇಳಿದ್ದರು.
ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸುತ್ತ ಅವರು ಮುಸ್ಲಿಮ್ ಸಮುದಾಯದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದರು.