ಒಡಿಶಾ: ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್‌ನಿಂದ ಅವಿಶ್ವಾಸ ನಿರ್ಣಯ
ಭುವನೇಶ್ವರ: ಒಡಿಶಾ ವಿಧಾನಸಭೆಯ ಮುಂಗಾರು ಅಧಿವೇಶನದ ಮೊದಲ ದಿನವಾದ ಗುರುವಾರ ಕಾಂಗ್ರೆಸ್ ಪಕ್ಷವು ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿದೆ.
ಶಾಸಕಾಂಗ ಪಕ್ಷದ ನಾಯಕ ರಾಮಚಂದ್ರ ಕದಂ ನೇತೃತ್ವದ ಕಾಂಗ್ರೆಸ್ ಶಾಸಕರ ನಿಯೋಗವು ವಿಧಾನಸಭಾ ಕಾರ್ಯದರ್ಶಿ ಸತ್ಯವ್ರತ ರೌತ್ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿ ಮೋಹನ ಚರಣ ಮಾಝಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯನ್ನು ಸಲ್ಲಿಸಿತು. ನಿರ್ಣಯಕ್ಕೆ 14 ಕಾಂಗ್ರೆಸ್ ಮತ್ತು ಓರ್ವ ಸಿಪಿಎಂ ಶಾಸಕರು ಸಹಿ ಹಾಕಿದ್ದಾರೆ.
ಬಿಜೆಪಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸುವಂತೆ ಕಾಂಗ್ರೆಸ್ ಈ ಮೊದಲು ಪ್ರಮುಖ ಪ್ರತಿಪಕ್ಷ ಬಿಜೆಡಿಗೆ ಆಗ್ರಹಿಸಿತ್ತಾದರೂ ಅದು ಸ್ಪಂದಿಸಿರಲಿಲ್ಲ.
ಕಾಂಗ್ರೆಸ್‌ನ ಕ್ರಮವನ್ನು ಗೇಲಿ ಮಾಡಿದ ಹಿರಿಯ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಜಯನಾರಾಯಣ ಮಿಶ್ರಾ ಅವರು, ಕಾಂಗ್ರೆಸ್ ತನ್ನನ್ನೇ ತಾನು ನಗೆಪಾಟಲಿಗೆ ಗುರಿಯಾಗಿಸಿಕೊಳ್ಳುತ್ತಿದೆ. ಬಿಜೆಪಿಗೆ ಹತ್ತಿರದಷ್ಟೂ ಸಂಖ್ಯಾಬಲ ಅದರ ಬಳಿಯಿಲ್ಲ. ಆದ್ದರಿಂದ ಇಂತಹ ವ್ಯರ್ಥ ಪ್ರಯತ್ನಕ್ಕೆ ಯಾವುದೇ ಅರ್ಥವಿಲ್ಲ ಎಂದರು.
147 ಸದಸ್ಯ ಬಲದ ಒಡಿಶಾ ವಿಧಾನಸಭೆಯಲ್ಲಿ ಬಿಜೆಪಿ 78, ಬಿಜೆಡಿ 50, ಕಾಂಗ್ರೆಸ್ 14 ಮತ್ತು ಸಿಪಿಎಂ ಓರ್ವ ಶಾಸಕರನ್ನು ಹೊಂದಿದ್ದರೆ,ಮೂವರು ಪಕ್ಷೇತರರಾಗಿದ್ದಾರೆ. ಒಂದು ಸ್ಥಾನವು ತೆರವಾಗಿದೆ.