ಮುಂಬೈ: ಓಲಾ, ಉಬರ್, ರ‍್ಯಾಪಿಡೊ ಚಾಲಕರಿಂದ ಮುಷ್ಕರ ವಾಪಸ್
ಸಾಂದರ್ಭಿಕ ಚಿತ್ರ
ಮುಂಬೈ: ಮುಂಬೈ ಮೆಟ್ರೊಪಾಲಿಟನ್ ವಲಯ ಮತ್ತು ಮಹಾರಾಷ್ಟ್ರದ ಇತರ ನಗರಗಳಲ್ಲಿ ನಡೆಸುತ್ತಿರುವ ಮುಷ್ಕರವನ್ನು ಆ್ಯಪ್ ಆಧಾರಿತ ಕ್ಯಾಬ್‌ಗಳ ಚಾಲಕರು ಶುಕ್ರವಾರ ಹಿಂದೆಗೆದುಕೊಂಡಿದ್ದಾರೆ. ಕರ್ತವ್ಯಕ್ಕೆ ಮರಳುವಂತೆ ಈ ಮುಷ್ಕರದಲ್ಲಿ ಭಾಗವಹಿಸಿರುವ 14 ಸಂಘಟನೆಗಳ ಪೈಕಿ ಅತಿ ದೊಡ್ಡದಾಗಿರುವ ಭಾರತೀಯ ಆ್ಯಪ್-ಆಧಾರಿತ ಸಾರಿಗೆ ಕೆಲಸಗಾರರ ಒಕ್ಕೂಟ (ಐಎಫ್‌ಎಟಿ)ವು ಮುಷ್ಕರ ನಿರತರಿಗೆ ಕರೆ ನೀಡಿದೆ.
ಮುಷ್ಕರವನ್ನು ಮುಂದುವರಿಸಲು ಕೆಲ ಚಾಲಕರು ಬಯಸಿದರಾದರೂ, ಹೆಚ್ಚಿನವರು ತಮ್ಮ ಜೀವನೋಪಾಯದ ಬಗ್ಗೆ ಚಿಂತಿತರಾಗಿದ್ದರು. ಹಾಗಾಗಿ, ತಮ್ಮ ಬೇಡಿಕೆಗಳ ಪರಿಶೀಲನೆಗೆ ಸರಕಾರಕ್ಕೆ ಸ್ವಲ್ಪ ಸಮಯ ಕೊಡಲು ಅವರು ಮುಂದಾದರು.
ರಾಜ್ಯ ಸಾರಿಗೆ ಇಲಾಖೆಯ ಅಧಿಕಾರಿಗಳೂ ಶುಕ್ರವಾರ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿ, ಮುಷ್ಕರ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದರು.
ಅಗ್ರಿಗೇಟರ್ ಕ್ಯಾಬ್ ನೀತಿಯನ್ನು ಪ್ರಾಮಾಣಿಕವಾಗಿ ಜಾರಿಗೆ ತರಬೇಕು, ಕಾಲಿ ಪೀಲಿ ಟ್ಯಾಕ್ಸಿಗಳಿಗೆ ಸಮಾನವಾಗಿ ಬಾಡಿಗೆ ವಿಧಿಸಬೇಕು, ಆ್ಯಪ್-ಆಧಾರಿತ ಬೈಕ್‌ಗಳು ಮತ್ತು ಆಟೊ ರಿಕ್ಷಾಗಳನ್ನು ನಿಷೇಧಿಸಬೇಕು ಮತ್ತು ಗ್ರಾಹಕರು ದೂರು ಸಲ್ಲಿಸಲು ಅವಕಾಶ ನೀಡುವ ಶುಲ್ಕರಹಿತ ಫೋನ್ ಸಂಖ್ಯೆಯನ್ನು ವಾಪಸ್ ಪಡೆದುಕೊಳ್ಳಬೇಕು ಎನ್ನುವುದು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆ್ಯಪ್-ಆಧಾರಿತ ಕ್ಯಾಬ್ ಚಾಲಕರು ಜುಲೈ 14ರಿಂದ ಮುಷ್ಕರ ನಡೆಸುತ್ತಿದ್ದರು.