ಹಳೆಯ ಸಂಸತ್ ಭವನ: ಭಾರತದ ಪ್ರಜಾಪ್ರಭುತ್ವದೊಂದಿಗಿನ ಮೆಲುಕು
ಹಳೆಯ ಸಂಸತ್ ಭವನ | Photo: PTI
ಹೊಸದಿಲ್ಲಿ: ನಾಲ್ಕು ತಿಂಗಳ ಹಿಂದೆ ಉದ್ಘಾಟನೆಯಾದ ಹೊಸ ಸಂಸತ್ ಭವನಕ್ಕೆ, ಸಂಸದೀಯ ಕಲಾಪಗಳು ಕಾಲಿಡುವ ಸಮಯ ಸನ್ನಿಹಿತವಾಗಿದೆ. ರವಿವಾರ ಭಾರತದ ಉಪರಾಷ್ಟ್ರಪತಿಗಳು ಹಾಗೂ ರಾಜಸ್ಯಸಭೆಯ ಸ್ಪೀಕರ್ ಜಗ್‌ದೀಪ್ ಧನ್‌ಕರ್ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಹೊಸ ಸಂಸತ್ ಭವನದ ಕಲಾಪಗಳು ವಿಶೇಷ ಅಧಿವೇಶದಲ್ಲೇ ಆರಂಭವಾಗುವ ಮುನ್ಸೂಚನೆ ನೀಡಿದ್ದಾರೆ. ಅತೀ ದೊಡ್ಡ ಪ್ರಜಾಪ್ರಭುತ್ವದ ಯಶಸ್ಸಿನ ಮೆಟ್ಟಿಲುಗಳು ಭದ್ರವಾಗಲು ಕಾರಣವಾದ ಹಳೆಯ ಸಂಸತ್ ಭವನ ಇತಿಹಾಸದ ಪುಟಗಳಿಗೆ ಸೇರಲಿದೆ. ದೇಶದ ಪ್ರಜಾಸತ್ತಾತ್ಮಕ ಪಯಣದ ಭಾಗವಾಗಿದ್ದ ಹಳೆಯ ಸಂಸತ್ ಭವನದ ಕುರಿತು PTI ಸುದ್ದಿ ಸಂಸ್ಥೆ ಮೆಲುಕು ಇಲ್ಲಿದೆ.
ಅಂದಿನ ಬ್ರಿಟಿಷ್ ವೈಸ್ ರಾಯ್ ಲಾರ್ಡ್ ಇರ್ವಿನ್ ಜನವರಿ 18, 1927ರಲ್ಲಿ ಉದ್ಘಾಟಿಸಿದ ಪ್ರಜಾಪ್ರಭುತ್ವದ ಹೆಗ್ಗುರುತಾದ ಈ ಸಂಸತ್ ಭವನ. ವಸಾಹತುಶಾಹಿ ಆಡಳಿತ, ಎರಡನೇ ವಿಶ್ವ ಯುದ್ಧ, ಸ್ವತಂತ್ರ ಭಾರತ, ಸಂವಿಧಾನದ ಅನುಷ್ಠಾನ ಹಾಗೂ ಹಲವಾರು ಹೆಗ್ಗುರುತಿನಂಥ ಶಾಸನಗಳಿಂದ ಹಿಡಿದು ವಿವಾದಾತ್ಮಕ ಕಾನೂನುಗಳವರೆಗಿನ ಅನುಮೋದನೆವರೆಗೆ ಸಾಕ್ಷಿಯಾಗಿದೆ.
ಇತಿಹಾಸಕಾರರು ಹಾಗೂ ಸಂರಕ್ಷಣಾ ವಾಸ್ತು ತಜ್ಞರು, ಹಳೆಯ ಸಂಸತ್ ಭವನವನ್ನು “ಭಾರತದ ಚರಿತ್ರೆಯ ಭಂಡಾರ” ಎಂದು ಬಣ್ಣಿಸಿದ್ದು, ಅದರ ಪ್ರಜಾಸತ್ತಾತ್ಮಕ ಪ್ರತಿಧ್ವನಿಗಳನ್ನು ಶ್ಲಾಘಿಸಿದ್ದಾರೆ. ಹಾಗೆಯೇ ಅದನ್ನು ದಿಲ್ಲಿಯ ವಾಸ್ತುಶಿಲ್ಪದ ಆಭರಣ ಎಂದು ವ್ಯಾಖ್ಯಾನಿಸಿದ್ದಾರೆ.
ದಾಖಲೆಗಳು ಮತ್ತು ಅಪರೂಪದ ಹಳೆಯ ಚಿತ್ರಗಳ ಪ್ರಕಾರ, ಕಟ್ಟಡದ ಉದ್ಘಾಟನೆಯನ್ನು ನೆನಪಿನಲ್ಲುಳಿಯುವಂತೆ ಮಾಡಲು ಭವ್ಯವಾದ ಸಮಾರಂಭವನ್ನು ಆಯೋಜಿಸಲಾಗಿತ್ತು ಎಂದು ತಿಳಿಯುತ್ತದೆ. ನಂತರ ಅದನ್ನು ಕೌನ್ಸಿಲ್ ಹೌಸ್ ಎಂದು ಕರೆಯಲಾಗಿತ್ತು.
560 ಅಡಿ ವ್ಯಾಸ ಮತ್ತು ಮೂರನೇ ಒಂದು ಮೈಲಿ ಸುತ್ತಳತೆ ಹೊಂದಿರುವ ಈ ಕಟ್ಟಡವನ್ನು ಸರ್ ಎಡ್ವಿನ್ ಲುಟ್ಯೆನ್ಸ್ ಅವರೊಡನೆ ಸೇರಿ ಸರ್ ಹರ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದ್ದರು. ಹೊಸ ಸಾಮ್ರಾಜ್ಯಶಾಹಿ ರಾಜಧಾನಿಯನ್ನು ವಿನ್ಯಾಸಗೊಳಿಸಲು ದೆಹಲಿಯನ್ನು ಆಯ್ಕೆ ಮಾಡಲಾಗಿತ್ತು.
ಮಾಳವಿಕಾ ಸಿಂಗ್ ಮತ್ತು ರುದ್ರಾಂಗ್‌ಶು ಮುಖರ್ಜಿಯವರ 'ನ್ಯೂ ಡೆಲ್ಲಿ: ಮೇಕಿಂಗ್ ಆಫ್ ಎ ಕ್ಯಾಪಿಟಲ್' ಪುಸ್ತಕ ಹಳೆಯ ಸಂಸತ್ ಭವನ ಉದ್ಘಾಟನೆಯ ನೆನಪುಗಳ ಕಡೆಗೆ ಬೆಳಕು ಚೆಲ್ಲುತ್ತದೆ. ಲಾರ್ಡ್ ಇರ್ವಿನ್ ಅವರು ಗ್ರೇಟ್ ಪ್ಲೇಸ್‌ನಲ್ಲಿ (ಈಗಿನ ವಿಜಯ್ ಚೌಕ್) ಸ್ಥಾಪಿಸಲಾದ ಪೆವಿಲಿಯನ್‌ಗೆ ತಮ್ಮ ವೈಸರೆಗಲ್ ಕ್ಯಾರೇಜ್‌ನಲ್ಲಿ ಉದ್ಘಾಟನೆಗೆ ಆಗಮಿಸಿದ್ದರು. ಕೌನ್ಸಿಲ್ ಹೌಸನ್ನು ಸರ್ ಹರ್ಬರ್ಟ್ ಬೇಕರ್ ನೀಡಿದ ಚಿನ್ನದ ಕೀಲಿ ಕೈಯೊಂದಿಗೆ ಬಾಗಿಲು ತೆರೆಯಲು ಮುಂದಾದರು. ಇಂದು ಭಾರತದ ಪ್ರಜಾಪ್ರಭುತ್ವದ ಮಂದಿರ ಎಂದು ಪೂಜಿಸಲ್ಪಡುವ ಸಂಸತ್ ಭವನದ ಉದ್ಘಾಟನೆ ಎಂದು ದೇಶೀಯ ಮತ್ತು ವಿದೇಶಿ ಪತ್ರಿಕೆಗಳು ವರದಿ ಮಾಡಿದ್ದವು. ಸಂಸತ್ ಭವನದ ಉದ್ಘಾಟನೆ ದೇಶ ವಿದೇಶಗಳಲ್ಲಿ ಅಷ್ಟರ ಮಟ್ಟಿಗೆ ಸದ್ದು ಮಾಡಿತ್ತು.
ಸುಮಾರು ಆರು ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿರುವ ವಿಸ್ತಾರವಾದ ಕಟ್ಟಡವು ಪ್ರಪಂಚದಲ್ಲೇ ಅತ್ಯಂತ ವಿಶಿಷ್ಟವಾದ ಸಂಸತ್ತಿನ ಕಟ್ಟಡಗಳಲ್ಲಿ ಒಂದಾಗಿದೆ. ಹೆಚ್ಚು ವ್ಯಾಖ್ಯಾನಿಸುವ ಮತ್ತು ವ್ಯಾಪಕವಾಗಿ ಗುರುತಿಸಲ್ಪಟ್ಟ ರಚನೆಗಳಲ್ಲಿ ಒಂದು ಗುರುತಿಸಲ್ಪಟ್ಟಿದೆ.
ಆಗಸ್ಟ್ 11, 2023ಕ್ಕೆ ಮುಕ್ತಾಯಗೊಂಡ ಮಾನ್ಸೂನ್ ಅಧಿವೇಶನ ಹಳೆಯ ಸಂಸತ್ ಭವನದ ಕೊನೆಯ ಅಧಿವೇಶನ. ಹಳೆಯ ಅಧಿವೇಶನವು 23 ದಿನಗಳಲ್ಲಿ 17 ಬಾರಿ ಸೇರಿತ್ತು ಎಂಬುದು ವಿಶೇಷ.
“ಹಳೆಯ ಸಂಸತ್ ಭವನವು ಕೇವಲ ಪ್ರಾತಿನಿಧಿಕ ಕಟ್ಟಡ ಮಾತ್ರವಲ್ಲ; ಅದು ಇತಿಹಾಸದ ಭಂಡಾರ ಮತ್ತು ಪ್ರಜಾಪ್ರಭುತ್ವದ ಭಂಡಾರ, ಭವಿಷ್ಯದಲ್ಲಿ ಹೆಚ್ಚಿನ ಸ್ಥಳಾವಕಾಶದ ಅಗತ್ಯವನ್ನು ಉಲ್ಲೇಖಿಸಿ ಸರ್ಕಾರವು ಹೊಸ ಸಂಕೀರ್ಣವನ್ನು ನಿರ್ಮಿಸಿದೆ. ಇದು ಕೇಂದ್ರ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿದೆ” ಎಂದು ಪ್ರಖ್ಯಾತ ಸಂರಕ್ಷಣಾ ವಾಸ್ತುಶಿಲ್ಪಿ ಎ.ಜಿ.ಕೆ.ಮೆನನ್ ಹೇಳಿದ್ದಾರೆ.
ಇದು ಸ್ವತಂತ್ರ ಭಾರತದ ಉದಯಕ್ಕೆ ಸಾಕ್ಷಿಯಾದ ಹೆಗ್ಗುರುತಿನ ಕಟ್ಟಡ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ "ಟ್ರಿಸ್ಟ್ ವಿತ್ ಡೆಸ್ಟಿನಿ" ಭಾಷಣದ ಪ್ರತಿಧ್ವನಿಗಳನ್ನು ಈ ಕಟ್ಟಡ ಕೇಳಿದೆ. ಸಂವಿಧಾನ ಚರ್ಚಿಸಿ ಮತ್ತು ಅಂಗೀಕರಿಸಿದ ಹೆಗ್ಗುರುತು ಈ ಕಟ್ಟಡಕ್ಕಿದೆ ಎಂದು ಮೆನನ್ ನೆನಪಿಸುತ್ತಾರೆ.
ಹೊಸ ತ್ರಿಕೋನ ಆಕಾರದ ನಾಲ್ಕು ಅಂತಸ್ತಿನ ಕಟ್ಟಡವು 64,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಇದು ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸಲು ಭವ್ಯವಾದ ಸಂವಿಧಾನ ಸಭಾಂಗಣ, ಸಂಸದರಿಗೆ ವಿಶ್ರಾಂತಿ ಕೋಣೆ, ಗ್ರಂಥಾಲಯ, ಬಹು ಕಮಿಟಿ ಕೊಠಡಿಗಳು, ಊಟದ ಪ್ರದೇಶಗಳು ಮತ್ತು ಸಾಕಷ್ಟು ಪಾರ್ಕಿಂಗ್ ಸ್ಥಳವನ್ನು ಹೊಂದಿರುತ್ತದೆ.