ಎಲ್‌ಜಿಗೆ ಭಡ್ತಿ ನೀಡಿದರೆ, ನನಗೆ ಹಿಂಭಡ್ತಿ ಕೊಡಲಾಗಿದೆ: ಉಮರ್ ಅಬ್ದುಲ್ಲಾ
ಉಮರ್ ಅಬ್ದುಲ್ಲಾ | PTI
ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮರಳಿಸುವಂತೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಗೆ ಮತ್ತೊಮ್ಮೆ ಮನವಿ ಮಾಡಿದ್ದಾರೆ.
ಚೀನಾಬ್ ಸೇತುವೆ ಮತ್ತು ಕತ್ರ-ಶ್ರೀನಗರ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಅವರು ತನ್ನ ಬೇಡಿಕೆಯನ್ನು ಮಂಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ಮನೋಜ್ ಸಿನ್ಹಾ ಉಪಸ್ಥಿತರಿದ್ದರು.
‘‘ಜಮ್ಮು ಮತ್ತು ಕಾಶ್ಮೀರದ ರೈಲ್ವೇ ಯೋಜನೆಗಳಿಗೆ ಸಂಬಂಧಿಸಿ ಪ್ರಧಾನಿ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟವಾಗಿದೆ. ಮೊದಲು, ಅನಂತನಾಗ್ ರೈಲು ನಿಲ್ದಾಣ ಉದ್ಘಾಟನೆಯಾಯಿತು ಮತ್ತು ಎರಡನೆಯದಾಗಿ, ಬನಿಹಾಲ್ ರೈಲು ಸುರಂಗ ಮಾರ್ಗ ಉದ್ಘಾಟನೆಗೊಂಡಿತು’’ ಎಂದು ತನ್ನ ಭಾಷಣದಲ್ಲಿ ಅಬ್ದುಲ್ಲಾ ಹೇಳಿದರು.
ರಾಜ್ಯ ಸ್ಥಾನಮಾನದ ಬಗ್ಗೆ ಮಾತನಾಡಿದ ಅಬ್ದುಲ್ಲಾ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾರಿಗೆ ಕಿರಿಯ ಹುದ್ದೆಯಿಂದ ಪ್ರಸಕ್ತ ಹುದ್ದೆಗೆ ಭಡ್ತಿ ನೀಡಲಾದರೆ, ತನ್ನನ್ನು ರಾಜ್ಯವೊಂದರ ಮುಖ್ಯಮಂತ್ರಿ ಹುದ್ದೆಯಿಂದ ಕೇಂದ್ರಾಡಳಿತ ಪ್ರದೇಶವೊಂದರ ಮುಖ್ಯಮಂತ್ರಿ ಹುದ್ದೆಗೆ ಹಿಂಭಡ್ತಿ ನೀಡಲಾಗಿದೆ ಎಂಬುದಾಗಿ ಲಘು ಧಾಟಿಯಲ್ಲಿ ಹೇಳಿದರು.
‘‘2014ರಲ್ಲಿ ಕತ್ರ ರೈಲು ನಿಲ್ದಾಣ ಉದ್ಘಾಟನೆಯಾದಾಗ ಇದೇ ನಾಲ್ವರು ಇಲ್ಲಿದ್ದರು. ಅಂದು ರೈಲ್ವೇ ಖಾತೆ ಸಹಾಯಕ ಸಚಿವರಾಗಿದ್ದ ಮನೋಜ್ ಸಿನ್ಹಾರಿಗೆ ಈಗ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಹುದ್ದೆ ನೀಡಲಾಗಿದೆ, ಆದರೆ ನಾನು ರಾಜ್ಯವೊಂದರ ಮುಖ್ಯಮಂತ್ರಿ ಸ್ಥಾನದಿಂದ ಕೇಂದ್ರಾಡಳಿತ ಪ್ರದೇಶವೊಂದರ ಮುಖ್ಯಮಂತ್ರಿ ಸ್ಥಾನಕ್ಕೆ ಹಿಂಭಡ್ತಿ ಪಡೆದಿದ್ದೇನೆ. ಆದರೆ ಪರಿಸ್ಥಿತಿಯು ನಮ್ಮ ಗಮನಕ್ಕೆ ಬರುವ ಮೊದಲೇ ಸಾಮಾನ್ಯ ಸ್ಥಿತಿಗೆ ಮರಳಲಿದೆ. ಪ್ರಧಾನಿ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ನೀಡಲಿದ್ದಾರೆ’’ ಎಂದು ಅವರು ನುಡಿದರು.