×
Ad

ʼಹುತಾತ್ಮರ ದಿನʼ: ಗೃಹ ಬಂಧನ ಧಿಕ್ಕರಿಸಿ ಗೋಡೆಯೇರಿ ಹುತಾತ್ಮರ ಸಮಾಧಿಗೆ ಭೇಟಿ ನೀಡಿದ ಜಮ್ಮುಕಾಶ್ಮೀರ ಸಿಎಂ ಉಮರ್ ಅಬ್ದುಲ್ಲಾ

Update: 2025-07-14 16:50 IST

Screengrab: X/@OmarAbdullah

ಶ್ರೀನಗರ: ತಮ್ಮನ್ನು ಗೃಹ ಬಂಧನದಲ್ಲಿರಿಸಿರುವುದನ್ನು ಧಿಕ್ಕರಿಸಿ, ತಮ್ಮ ಮನೆಯ ಗೋಡೆಯ ಮೇಲಿನ ಏಣಿಯಿಂದ ಕೆಳಗಿಳಿದು, ನೌಹತ್ತಾದಲ್ಲಿರುವ ಹುತಾತ್ಮರ ಸ್ಮಶಾನಕ್ಕೆ ಭೇಟಿ ನೀಡಿದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ಹುತಾತ್ಮರ ಸಮಾಧಿಗಳಿಗೆ ಪುಷ್ಪನಮನ ಸಲ್ಲಿಸಿದರು. ಈ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ವಲಯದಲ್ಲಿ ‘ಹುತಾತ್ಮರ ದಿನ’ ಎಂದು ಸ್ಮರಿಸುವ 1931ರ ಹತ್ಯಾಕಾಂಡದ ವರ್ಷವಾದ ರವಿವಾರ ಹುತಾತ್ಮರ ಸಮಾಧಿಗಳ ಸಮೀಪ ರಾಜಕೀಯ ನಾಯಕರು ಹಾಗೂ ಸಾರ್ವಜನಿಕರು ಸೇರುವುದನ್ನು ತಡೆಯಲು ಜಮ್ಮು ಹಾಗೂ ಕಾಶ್ಮೀರ ಆಡಳಿತ ಶ್ರೀನಗರದಲ್ಲಿ ರವಿವಾರ ಭಾಗಶಃ ಲಾಕ್‌ ಡೌನ್ ಜಾರಿಗೊಳಿಸಿತ್ತು.

ಜುಲೈ 13, 1931 ಅನ್ನು ಹುತಾತ್ಮರ ದಿನಾಚರಣೆಯನ್ನಾಗಿ ಆಚರಿಸುತ್ತಾ ಬರಲಾಗುತ್ತಿದ್ದು, ಈ ಬಾರಿ ಅದಕ್ಕೆ ಅನುಮತಿ ನಿರಾಕರಿಸಿರುವ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಸೇರಿದಂತೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಹಲವಾರು ನಾಯಕರನ್ನು ಗೃಹ ಬಂಧನದಲ್ಲಿರಿಸಿದ್ದರು. ಈ ನಡೆಯನ್ನು ಧಿಕ್ಕರಿಸಿ, ಉಮರ್ ಅಬ್ದುಲ್ಲಾ ತಮ್ಮ ಮನೆಯ ದ್ವಾರದ ಮೇಲೇರಿ, ಗೋಡೆಯಿಂದ ಕೆಳಗೆ ಜಿಗಿದು ಹುತಾತ್ಮರ ಸ್ಮಶಾನಕ್ಕೆ ಭೇಟಿ ನೀಡಿದರು.

ಈ ವೈರಲ್ ವಿಡಿಯೊದಲ್ಲಿ ಉಮರ್ ಅಬ್ದುಲ್ಲಾ ಅವರು ತಮ್ಮ ಸಂಪುಟದ ಸಚಿವರೊಂದಿಗೆ ಸ್ಮಶಾನದತ್ತ ನಡೆದು ಹೋಗುತ್ತಿರುವುದು ಹಾಗೂ ಅವರನ್ನು ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಗಳು ಸುತ್ತುವರಿದಿರುವುದು ಸೆರೆಯಾಗಿದೆ. ತಮ್ಮ ನಿವಾಸದ ದ್ವಾರಕ್ಕೆ ಬೀಗ ಹಾಕಿದಂತೆ ಕಂಡು ಬಂದಿದ್ದರಿಂದ, ದ್ವಾರದ ಮೇಲೇರಿದ ಉಮರ್ ಅಬ್ದುಲ್ಲಾ, ಸ್ಮಶಾನವನ್ನು ಪ್ರವೇಶಿಸಲು ಗೋಡೆಯ ಮೇಲಿಂದ ಕೆಳಗೆ ಜಾರುತ್ತಿರುವ ದೃಶ್ಯವನ್ನೂ ಕೂಡಾ ಈ ವಿಡಿಯೊದಲ್ಲಿ ಕಾಣಬಹುದಾಗಿದೆ.

ಈ ವಿಡಿಯೊವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಉಮರ್ ಅಬ್ದುಲ್ಲಾ, “ಜುಲೈ 13, 1931ರ ಹುತಾತ್ಮರ ಸ್ಮಶಾನದಲ್ಲಿ ನಾನು ನನ್ನ ಗೌರವ ಮತ್ತು ವಂದನೆಯನ್ನು ಸಲ್ಲಿಸಿದೆ. ಚುನಾಯಿತವಲ್ಲದ ಸರಕಾರ ನನ್ನನ್ನು ತಡೆ ಹಿಡಿಯಲು ಪ್ರಯತ್ನಿಸಿದ್ದರಿಂದ, ನಾನು ಅನಿವಾರ್ಯವಾಗಿ ನೌಹತ್ತಾ ಚೌಕದಲ್ಲಿ ನಡೆದುಕೊಂಡು ಹೋಗುವಂತಾಯಿತು. ನಕ್ಷ್ ಬಂದ್ ಎಸ್ಬಿ ಮಸೀದಿಗೆ ತೆರಳುವ ದ್ವಾರಕ್ಕೆ ಬೀಗ ಹಾಕಿದ್ದರಿಂದ, ನಾನು ಅನಿವಾರ್ಯವಾಗಿ ಗೋಡೆಯಿಂದ ಕೆಳಕ್ಕೆ ಜಾರಿ ಇಳಿಯುವಂತಾಯಿತು. ಅವರು ನನ್ನನ್ನು ದೈಹಿಕವಾಗಿ ತಡೆಯಲು ಪ್ರಯತ್ನಿಸಿದರೂ, ಇಂದು ನನ್ನನ್ನು ತಡೆಯಲು ಸಾಧ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ.

ರಾಜಪ್ರಭುತ್ವ ರಾಜ್ಯವಾಗಿದ್ದ ಜಮ್ಮು ಮತ್ತು ಕಾಶ್ಮೀರದ ರಾಜ ಹರಿಸಿಂಗ್ ಅವರು ತಮ್ಮ ಆಡಳಿತದ ವಿರುದ್ಧ ಪ್ರತಿಭಟಿಸಿದವರನ್ನು ಹತ್ಯೆಗೈದಿದ್ದ ಜುಲೈ 13, 1931 ಅನ್ನು ಹುತಾತ್ಮರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ಈ ಬಾರಿ ಹುತಾತ್ಮರ ದಿನಾಚರಣೆ ಆಚರಿಸಲು ಜಮ್ಮು ಮತ್ತು ಕಾಶ್ಮೀರದ ನಾಯಕರಿಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅನುಮತಿ ನಿರಾಕರಿಸಿದ್ದರು. ಇದರ ಬೆನ್ನಿಗೇ, ಈ ಘಟನೆ ನಡೆದಿದೆ.

ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕರು ಹುತಾತ್ಮರ ದಿನಾಚರಣೆ ನಡೆಸುವುದನ್ನು ತಡೆಯಲು, ಆ ಪಕ್ಷದ ಹಲವಾರು ನಾಯಕರನ್ನು ರವಿವಾರ ಗೃಹ ಬಂಧನದಲ್ಲಿರಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News