×
Ad

ʼಏಕತಾ ಪ್ರತಿಮೆʼ ಸ್ಮಾರಕಕ್ಕೆ ಉಮರ್ ಅಬ್ದುಲ್ಲಾ ಭೇಟಿ; ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದು ಹೀಗೆ...

Update: 2025-08-01 16:56 IST

ಉಮರ್ ಅಬ್ದುಲ್ಲಾ | PC : @souindia

ಅಹಮದಾಬಾದ್: ಪ್ರವಾಸೋದ್ಯಮ ಅಭಿವೃದ್ಧಿ ಸಭೆಯಲ್ಲಿ ಪಾಲ್ಗೊಳ್ಳಲೆಂದು ಗುಜರಾತ್ ನ ಅಹಮದಾಬಾದ್ ಗೆ ಆಗಮಿಸಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ಗುರುವಾರ ಸಂಜೆ ಏಕ್ತಾ ನಗರದಲ್ಲಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕತಾ ಪ್ರತಿಮೆ (Statue of Unity) ಸ್ಮಾರಕಕ್ಕೆ ಭೇಟಿ ನೀಡಿದ್ದರು.

ಉಮರ್ ಅಬ್ದುಲ್ಲಾ ಅವರು ಏಕತಾ ಪ್ರತಿಮೆಯ ಮುಂದೆ ನಿಂತುಕೊಂಡಿರುವ ಚಿತ್ರವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, “ನಿಮ್ಮನ್ನು ಹೀಗೆ ನೋಡುವುದಕ್ಕೆ ಖುಷಿಯಾಗುತ್ತಿದೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

“ಕಾಶ್ಮೀರದಿಂದ ಕಾವಡಿಯಾ(ಏಕ್ತಾನಗರ)ಗೆ ಬಂದಿದ್ದೀರಿ. ನಿಮ್ಮನ್ನು ಹೀಗೆ ನೋಡುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ನೀವು ಏಕತೆಯ ಸಂದೇಶವನ್ನು ಹೊತ್ತು ತಂದಿದ್ದೀರಿ. ಭಾರತದ ಜನರು ದೇಶದ ವಿವಿಧೆಡೆ ಹೀಗೆ ಏಕತೆ ಸಂದೇಶ ಸಾರುತ್ತಾ ಪ್ರವಾಸ ಮಾಡುತ್ತಾರೆ ಎಂಬ ಭಾವನೆ ನನ್ನದು” ಎಂದು ಅವರು ಶ್ಲಾಘಿಸಿದ್ದಾರೆ.

ಇದಕ್ಕೂ ಮುನ್ನ, ಅಹಮದಾಬಾದ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಮರ್ ಅಬ್ದುಲ್ಲಾ, “ಪ್ರವಾಸೋದ್ಯಮದ ಮೇಲೆ ಪಹಲ್ಗಾಮ್ ದಾಳಿ ಪರಿಣಾಮ ಬೀರಿದೆ ಎಂಬುದನ್ನು ಅಲ್ಲಗಳೆಯಲಾರೆ. ಪ್ರವಾಸದ ಋತುವಿನ ಆರಂಭದಲ್ಲೇ ದಾಳಿ ನಡೆದಿದ್ದರಿಂದಾಗಿ, ಪ್ರವಾಸಿಗರು ರಾತ್ರೋರಾತ್ರಿ ಕಣಿವೆಯಿಂದ ಹೊರ ನಡೆದರು. ಆದರೆ, ಕಾಶ್ಮೀರ ಖಾಲಿಯಾಗಿಲ್ಲ. ನಾವಿಲ್ಲಿಗೆ ಹತಾಶೆಯಿಂದ ಬಂದಿಲ್ಲ. ಹೆಚ್ಚು ಹೆಚ್ಚು ಜನರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಬೇಕು ಎಂಬುದು ನಮ್ಮ ಬಯಕೆಯಾಗಿದೆ. ಹೀಗಾಗಿ, ಯಾವುದೇ ತಪ್ಪು ತಿಳಿವಳಿಕೆ ಬೇಡ. ಮಾತಾ ವೈಷ್ಣೋದೇವಿ ಯಾತ್ರೆ ಹಾಗೂ ಅಮರನಾಥ ಯಾತ್ರೆ ಸಲುವಾಗಿ ಲಕ್ಷಾಂತರ ಜನರು ಪಹಲ್ಗಾಮ್ ದಾಳಿಯ ಬಳಿಕವೂ ಈಗಾಗಲೇ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ” ಎಂದು ಸ್ಪಷ್ಟಪಡಿಸಿದರು.

ಕಾಶ್ಮೀರದ ಟ್ರಾವೆಲ್ ಏಜೆಂಟ್ಸ್ ಸೊಸೈಟಿ (ಟಿಎಎಸ್ಕೆ) ಆಯೋಜಿಸಿದ್ದ ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಉತ್ತೇಜನ ಕಾರ್ಯಕ್ರಮದ ಅಂಗವಾಗಿ ಉಮರ್ ಅಬ್ದುಲ್ಲಾ ಗುಜರಾತ್ ಗೆ ಆಗಮಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News