ಕಾರ್ಬೆಟ್ ಅಭಯಾರಣ್ಯದಲ್ಲಿ ಹುಲಿ ದಾಳಿಗೆ ಓರ್ವ ಬಲಿ
ಸಾಂದರ್ಭಿಕ ಚಿತ್ರ
ಡೆಹ್ರಾಡೂನ್: ಉತ್ತರಾಖಂಡದ ಕಾರ್ಬೆಟ್ ಹುಲಿ ಅಭಯಾರಣ್ಯದಲ್ಲಿ ಸೋಮವಾರ ನಡೆದ ಹುಲಿ ದಾಳಿ ಘಟನೆಯೊಂದರಲ್ಲಿ 35 ವರ್ಷದ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಹುಲಿಯೊಂದು ವ್ಯಕ್ತಿಯೋರ್ವರ ಮೇಲೆ ದಾಳಿ ನಡೆಸುವುದನ್ನು ನೋಡಿ ಸ್ಥಳೀಯರು ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದರು ಎಂದು ತರಾಯಿ ಪಶ್ಚಿಮ ಅರಣ್ಯ ವಿಭಾಗದ ವಿಭಾಗೀಯ ಅರಣ್ಯಾಧಿಕಾರಿ ಪ್ರಕಾಶ್ ಚಂದ್ರ ಆರ್ಯ ತಿಳಿಸಿದರು.
‘‘ಮಾಹಿತಿ ಪಡೆದ ಬಳಿಕ, ನಮ್ಮ ತಂಡವು ಸ್ಥಳಕ್ಕೆ ಧಾವಿಸಿತು. ಮೃತದೇಹವನ್ನು ಪತ್ತೆಹಚ್ಚಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿತು’’ ಎಂದು ಅವರು ಹೇಳಿದರು.
ಹುಲಿ ದಾಳಿಯಲ್ಲಿ ಮೃತಪಟ್ಟಿರುವ ವ್ಯಕ್ತಿಯನ್ನು ರಾಮನಗರ ಪ್ರದೇಶದ ಸಕ್ಕನ್‌ಪುರ ಪೀರುಮ್ ದರ ನಿವಾಸಿ ವಿನೋದ್ ಕುಮಾರ್ ಎಂಬುದಾಗಿ ಗುರುತಿಸಲಾಗಿದೆ.
ಮೃತ ವಿನೋದ್ ಮತ್ತು ಇತರ ಕೆಲವರು ಕಟ್ಟಿಗೆ ತರುವುದಕ್ಕಾಗಿ ಕಾಡು ಪ್ರವೇಶಿಸಿದ್ದರು. ಆಗ ಹುಲಿಯೊಂದು ವಿನೋದ್ ಮೇಲೆ ಒಮ್ಮೆಲೆ ಹಾರಿ ಕಾಡಿನೊಳಗೆ ಎತ್ತಿಕೊಂಡು ಹೋಯಿತು. ಇತರರು ಬೊಬ್ಬೆಹೊಡೆದಾಗ ಹುಲಿ ಆತನನ್ನು ಬಿಟ್ಟು ಪರಾರಿಯಾಯಿತು ಎಂದು ಆರ್ಯ ತಿಳಿಸಿದರು.
ಮೃತದೇಹವು ದಾಳಿ ನಡೆದ ಸ್ಥಳದಿಂದ ಸುಮಾರು 100 ಮೀಟರ್ ದೂರದಲ್ಲಿ ಪತ್ತೆಯಾಯಿತು.