×
Ad

ಗುಂಡಿನ ಕಾಳಗದಲ್ಲಿ ಓರ್ವ ವ್ಯಕ್ತಿ ಸಾವು

Update: 2023-11-20 22:55 IST

ಸಾಂದರ್ಭಿಕ ಚಿತ್ರ

ರಾಮ್‌ಪುರ: ರಾಮ್‌ಪುರ ಜಿಲ್ಲೆಯಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಗೋಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾದ ಇಬ್ಬರಲ್ಲಿ ಓರ್ವ ಸಾವನ್ನಪ್ಪಿದ್ದಾನೆ ಹಾಗೂ ಇನ್ನೋರ್ವ ಗಾಯಗೊಂಡಿದ್ದಾನೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

ಪಟ್ವಾಯಿ ಪೊಲೀಸ್ ಠಾಣಾ ಪ್ರದೇಶದಲ್ಲಿ ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಸಂದರ್ಭ ಪೊಲೀಸರು ಆರೋಪಿಗಳಾದ ಸಾಜಿದ್ ಹಾಗೂ ಬಬ್ಲು ವಾಹನದಲ್ಲಿ ರವಿವಾರ ರಾತ್ರಿ ಮೊರಾದಾಬಾದ್‌ಗೆ ಬರುತ್ತಾರೆ ಎಂದು ಮಾಹಿತಿ ಸ್ವೀಕರಿಸಿದ್ದರು ಎಂದು ರಾಮ್‌ಪುರ ಪೊಲೀಸ್ ಅಧೀಕ್ಷಕ ರಾಜೇಶ್ ದ್ವಿವೇದಿ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಪಟ್ವಾಯಿ ಪೊಲೀಸರು ತಪಾಸಣಾ ಠಾಣೆ ನಿರ್ಮಿಸಿದ್ದರು. ಇಲ್ಲಿ ಕಾರುಗಳನ್ನು ತಪಾಸಣೆ ನಡೆಸುತ್ತಿರುವಾಗ ಮೊರದಾಬಾದ್ ಕಡೆಯಿಂದ ವಾಹನವೊಂದು ಅತಿ ವೇಗದಲ್ಲಿ ಬರುತ್ತಿರುವುದನ್ನು ಗಮನಿಸಿದರು. ಆದರೆ, ಆ ಕಾರು ತಪಾಸಣಾ ಠಾಣೆಯನ್ನು ನೋಡಿ ಹಿಂದಿರುಗಿತು. ಕೂಡಲೇ ಪೊಲೀಸರು ಕಾರನ್ನು ಹಿಂಬಾಲಿಸಿದರು ಎಂದು ಅವರು ತಿಳಿಸಿದ್ದಾರೆ.

ಇದರಿಂದ ಚಾಲಕ ಕಾರಿನ ನಿಯಂತ್ರಣ ಕಳೆದುಕೊಂಡ. ಕಾರು ಮಿಲಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಲ್ಟಿಯಾಯಿತು. ಇಬ್ಬರು ಆರೋಪಿಗಳು ಕಾರಿನಿಂದ ಹೊರ ಬಂದು ಪೊಲೀಸ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಲು ಆರಂಭಿಸಿದರು. ಪೊಲೀಸರು ಪ್ರತಿದಾಳಿ ನಡೆಸಿದರು. ಈ ಗುಂಡಿನ ಕಾಳಗದಲ್ಲಿ ಇಬ್ಬರು ಆರೋಪಿಗಳು ಗಾಯಗೊಂಡರು. ಅವರಿಬ್ಬರನ್ನೂ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಅವರಲ್ಲಿ ಸಾಜಿದ್ (23) ಮಾರ್ಗ ಮಧ್ಯೆ ಮೃತಪಟ್ಟ. ಇನೋರ್ವ ಆರೋಪಿ ಬಬ್ಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ದ್ವಿವೇದಿ ಹೇಳಿದ್ದಾರೆ.

ಸಾಜಿದ್ ಹಾಗೂ ಬಬ್ಲು ಮೊರದಾಬಾದ್‌ನ ನಿವಾಸಿಗಳು. ಇವರಿಬ್ಬರಿಗೂ ಕ್ರಿಮಿನಲ್ ಇತಿಹಾಸ ಇದೆ ಎಂದು ಅವರು ತಿಳಿಸಿದ್ದಾರೆ.

ಇವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307ರ ಅಡಿಯಲ್ಲಿ ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾರು, ದೇಶಿ ನಿರ್ಮಿತ ಪಿಸ್ತೂಲ್, ಸ್ಪೋಟಕ, ತೂಕ ಮಾಡುವ ಇಲೆಕ್ಟ್ರಾನಿಕ್ಸ್ ಯಂತ್ರ ಹಾಗೂ ಗೋಹತ್ಯೆಗೆ ಬಳಸಲಾಗುವ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದ್ವಿವೇದಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News