×
Ad

ಪ್ರಿಯತಮೆಯ ಪತಿಯನ್ನು ಹತ್ಯೆಗೈಯ್ಯಲು ಪಾರ್ಸೆಲ್ ನಲ್ಲಿ ಬಾಂಬ್ ರವಾನಿಸಿದ ಯುವಕ!

ಯೂಟ್ಯೂಬ್ ನೋಡಿ ಸುಧಾರಿತ ಸ್ಫೋಟಕ ಸಾಧನ ತಯಾರಿಸಿದ ವಿನಯ್ ವರ್ಮಾ

Update: 2025-08-17 16:14 IST

ಸಾಂದರ್ಭಿಕ ಚಿತ್ರ (Photo: Grok)

ಖೈರಗಢ (ಛತ್ತೀಸ್ ಗಢ): ಕಾಲೇಜು ದಿನಗಳಿಂದಲೂ ಪ್ರೀತಿಸುತ್ತಿದ್ದ ಯುವತಿಯ ವಿವಾಹವು ಬೇರೊಬ್ಬನ ಜೊತೆ ನೆರವೇರಿದ್ದರಿಂದ ಕುಪಿತಗೊಂಡ ಯುವಕನೊಬ್ಬ, ಬಾಂಬ್ ಅನ್ನು ʼಗಿಫ್ಟ್ ಪಾರ್ಸೆಲ್ʼ ಮಾಡಿರುವ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ.

ಎಲೆಕ್ಟ್ರಿಷಿಯನ್ ಆಗಿರುವ ವಿನಯ್ ವರ್ಮಾ (20) ಎಂಬಾತ ತನ್ನ ಪ್ರಿಯತಮೆಯ ಗಂಡನಿಗೆ ಮ್ಯೂಸಿಕ್ ಸ್ಪೀಕರ್ ಅನ್ನು ಉಡುಗೊರೆ ರೂಪದಲ್ಲಿ ಪಾರ್ಸೆಲ್ ಮಾಡಿದ್ದಾನೆ. ಯೂಟ್ಯೂಬ್ ನೋಡಿಕೊಂಡು ಅದರೊಳಗೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಅನ್ನು ಅಳವಡಿಸಿದ್ದಾನೆ. ಸುಧಾರಿತ ಸ್ಫೋಟಕ ಸಾಧನಕ್ಕೆ ಜಿಲೆಟಿನ್ ಕಡ್ಡಿಗಳ ಸಂಪರ್ಕ ಕಲ್ಪಿಸಿರುವ ಆತ, ಅದಕ್ಕೆ ವಿದ್ಯುತ್ ಪ್ರವಹಿಸಿದ ಕೂಡಲೇ ಬಾಂಬ್ ಸ್ಫೋಟಗೊಳ್ಳುವಂತೆ ತಯಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ಅಂಚೆಯ ಮೂಲಕ ತಲುಪಿದ ಉಡುಗೊರೆಯಿಂದ ಅನುಮಾನಗೊಂಡ ಪ್ರಿಯತಮೆಯ ಪತಿ ಅಫ್ಸರ್ ಖಾನ್, ತಕ್ಷಣವೇ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳ, ಉಡುಗೊರೆಯನ್ನು ಪರಿಶೀಲಿಸಿದಾಗ, ಸ್ಪೀಕರ್ ನೊಳಗೆ ಎರಡು ಕಿಲೋ ಸುಧಾರಿತ ಸ್ಫೋಟಕ ಸಾಧನ ಇರುವುದು ಪತ್ತೆಯಾಗಿದೆ.

ತನ್ನ ಪ್ರಿಯತಮೆಯ ಪತಿ ಅಫ್ಸರ್ ಖಾನ್ ಅನ್ನು ಹತ್ಯೆಗೈಯ್ಯುವ ಉದ್ದೇಶದಿಂದ ವಿನಯ್ ವರ್ಮಾ ಈ ಕೃತ್ಯವೆಸಗಿದ್ದು, ಆತನನ್ನು ಬಂಧಿಸಲಾಗಿದೆ. ಆತ ಗೂಗಲ್ ನಲ್ಲಿ ‘ಪೊಲೀಸರ ಕೈಗೆ ಸಿಕ್ಕಿ ಬೀಳದಂತೆ ಬಾಂಬ್ ಉಪಯೋಗಿಸಿ ವ್ಯಕ್ತಿಯನ್ನು ಹತ್ಯೆಗೈಯ್ಯುವುದು ಹೇಗೆ” ಎಂದು ಸರ್ಚ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕಗಳನ್ನು ಸರಬರಾಜು ಮಾಡಿದ ಆರೋಪದ ಮೇಲೆ ಇನ್ನೂ ಆರು ಮಂದಿಯನ್ನು ಬಂಧಿಸಲಾಗಿದೆ.

2023ರ ಎಪ್ರಿಲ್ ನಲ್ಲೂ ಛತ್ತೀಸ್ ಗಢದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಆ ಘಟನೆಯಲ್ಲಿ ಪ್ರಿಯತಮೆಯ ಪತಿ ಹಾಗೂ ಆತನ ಸಹೋದರ ಮೃತಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News