ಗಣೇಶ ವಿಗ್ರಹ ಸಾಗಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ ಓರ್ವ ವಿದ್ಯಾರ್ಥಿ ಮೃತ್ಯು, ಇತರ ನಾಲ್ವರಿಗೆ ಗಂಭೀರ ಗಾಯ
Photo: Screengrab: Twitter/@PTI_News
ಹೊಸದಿಲ್ಲಿ: ಕಟಕ್ ನಗರದ ನಾರಾಜ್ ಪ್ರದೇಶದಲ್ಲಿ ಗಣೇಶ ಮೂರ್ತಿಯನ್ನು ಟ್ರ್ಯಾಕ್ಟರ್ ನಲ್ಲಿಟ್ಟು ಸಾಗಿಸುತ್ತಿದ್ದಾಗ ಗಣೇಶ ಮೂರ್ತಿಯ ಮೇಲಿದ್ದ ಧ್ವಜವು 11 ಕೆವಿ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಖಾಸಗಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ ಹಾಗೂ ಇತರ ನಾಲ್ವರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾಸಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಸಂಸ್ಥೆಯಲ್ಲಿ ಗಣೇಶ ಮೂರ್ತಿಯನ್ನು ಪೂಜೆಗಾಗಿ ಕೊಂಡೊಯ್ಯುತ್ತಿದ್ದಾಗ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ಗಣೇಶ ಮೂರ್ತಿಯ ಮೇಲಿದ್ದ ಧ್ವಜಕ್ಕೆ 11 ಕೆವಿ ತಂತಿ ತಗಲಿದಾಗ ವಿಗ್ರಹದ ಜೊತೆಗೆ ಟ್ರ್ಯಾಕ್ಟರ್ನಲ್ಲಿದ್ದ ವಿದ್ಯಾರ್ಥಿಗಳು ವಿದ್ಯುತ್ ಶಾಕ್ ಗೆ ಒಳಗಾಗಿದ್ದು, ಅವರಲ್ಲಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಹಾಗೂ ಇತರರಿಗೆ ಗಂಭೀರ ಗಾಯಗಳಾಗಿವೆ.
ಮತ್ತೊಂದು ಘಟನೆಯಲ್ಲಿ, ಭುವನೇಶ್ವರದ ಸಹೀದ್ ನಗರದ ಶಾಂತಿಪಲ್ಲಿ ಪ್ರದೇಶದ ಯುವಕನೊಬ್ಬ ರಾಜ್ಯ ರಾಜಧಾನಿಯ ಹೊರವಲಯದಲ್ಲಿರುವ ಕುವಾಖೈ ನದಿಯಲ್ಲಿ ಭಗವಾನ್ ವಿಶ್ವಕರ್ಮರ ವಿಗ್ರಹವನ್ನು ಮುಳುಗಿಸುವಾಗ ಮುಳುಗಿ ಸಾವನ್ನಪ್ಪಿದ್ದಾನೆ.