×
Ad

ಅಸ್ಸಾಂನಲ್ಲಿ ಸಿಎಎ ಅಡಿಯಲ್ಲಿ ಮೂವರು ವಿದೇಶಿಯರು ಮಾತ್ರ ಪೌರತ್ವ ಪಡೆದಿದ್ದಾರೆ : ಸಿಎಂ ಹಿಮಂತ ಬಿಸ್ವಾ ಶರ್ಮಾ

Update: 2025-09-03 19:16 IST

Photo | NDTV

ಗುವಾಹಟಿ: ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(CAA) ಅಡಿಯಲ್ಲಿ ಕೇವಲ ಮೂವರು ವಿದೇಶಿಯರು ಮಾತ್ರ ಭಾರತದ ಪೌರತ್ವವನ್ನು ಪಡೆದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಅಧಿಕೃತ ಸಮಾರಂಭವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿಮಂತ ಬಿಸ್ವಾ ಶರ್ಮಾ, ಅಸ್ಸಾಂನಲ್ಲಿ ಲಕ್ಷಾಂತರ ವಿದೇಶಿಯರು ಪೌರತ್ವ ಪಡೆಯುತ್ತಾರೆ ಎಂಬ ಆತಂಕ ವ್ಯಕ್ತವಾಗಿತ್ತು. ಆದರೆ, ವಾಸ್ತವದಲ್ಲಿ 12 ಅರ್ಜಿಗಳಲ್ಲಿ ಕೇವಲ ಮೂವರಿಗೆ ಮಾತ್ರ ಪೌರತ್ವ ಸಿಕ್ಕಿದೆ. ಇನ್ನುಳಿದ 9 ಅರ್ಜಿಗಳು ಇನ್ನೂ ಪರಿಶೀಲನೆಯಲ್ಲಿವೆ ಎಂದು ಹೇಳಿದರು. ಆದರೆ ಪೌರತ್ವ ಪಡೆದವರ ಮೂಲ ದೇಶದ ವಿವರವನ್ನು ಹಿಮಂತ ಬಿಸ್ವಾ ಶರ್ಮಾ ಬಹಿರಂಗಪಡಿಸಿಲ್ಲ.

2019ರ ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ ಪಕ್ಷಗಳ ವಿರೋಧದ ಬಗ್ಗೆ ಮಾತನಾಡಿದ ಹಿಮಂತ ಬಿಸ್ವಾ ಶರ್ಮಾ, “ಅಸ್ಸಾಂನಲ್ಲಿ 20 ರಿಂದ 25 ಲಕ್ಷ ಜನ  ಪೌರತ್ವ ಪಡೆಯುತ್ತಾರೆ ಎಂದು ಹೇಳಲಾಗಿತ್ತು. ನಾವು ಕೇವಲ 12 ಅರ್ಜಿಗಳನ್ನು ಸ್ವೀಕರಿಸಿದ್ದೇವೆ, ಸಿಎಎ ಬಗ್ಗೆ ಚರ್ಚಿಸುವುದು ಪ್ರಸ್ತುತವೇ ಎಂದು ಈಗ ನೀವೇ ನಿರ್ಧರಿಸಿ" ಎಂದು ಹೇಳಿದರು.

ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಡಿಸೆಂಬರ್ 31, 2014ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಬಂದ ಹಿಂದೂಗಳು, ಜೈನರು, ಕ್ರೈಸ್ತರು, ಸಿಖ್ಖರು, ಬೌದ್ಧರು ಮತ್ತು ಪಾರ್ಸಿಗಳಿಗೆ ಪೌರತ್ವ ನೀಡುವ ಗುರಿಯನ್ನು ಸಿಎಎ ಹೊಂದಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News