×
Ad

ಆಪರೇಷನ್ ಸಿಂಧೂರ ಕಾರ್ಯಾಚರಣೆ | ಒಗ್ಗಟ್ಟಾಗಿರುವಂತೆ ವಿಪಕ್ಷಗಳಿಗೆ ಪ್ರಧಾನಿ ಮೋದಿ ಕರೆ

Update: 2025-05-08 17:17 IST

 ನರೇಂದ್ರ ಮೋದಿ | PC : PTI 

ಹೊಸದಿಲ್ಲಿ: ಇಂದು ನಡೆದ ಸರ್ವಪಕ್ಷಗಳ ಸಭೆಯಲ್ಲಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಕುರಿತು ವಿಪಕ್ಷಗಳ ನಾಯಕರೊಂದಿಗೆ ಕೇಂದ್ರ ಸರಕಾರ ಮಾಹಿತಿ ಹಂಚಿಕೊಂಡಿದ್ದು, ಇದರ ಬೆನ್ನಿಗೇ, ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳಿಗೆ ಮನವಿ ಮಾಡಿದ್ದಾರೆ.

ಬುಧವಾರ ಮುಂಜಾನೆ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ವ್ಯಾಪಕ ಪ್ರಮಾಣದ ವೈಮಾನಿಕ ದಾಳಿಯಲ್ಲಿ ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಲಾಗಿತ್ತು. ಈ ವೇಳೆ ಭಾರತೀಯ ಸಶಸ್ತ್ರ ಪಡೆಗಳು ತೋರಿದ ಶೌರ್ಯದ ಕುರಿತು ವಿರೋಧ ಪಕ್ಷಗಳಿಗೆ ವಿವರಿಸಲಾಯಿತು.

ಸರ್ವಪಕ್ಷಗಳ ಸಭೆ ಮುಕ್ತಾಯಗೊಂಡ ನಂತರ, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಕುರಿತು ತಮ್ಮ ಪ್ರಪ್ರಥಮ ಸಂದೇಶ ನೀಡಿರುವ ಪ್ರಧಾನಿ ನರೇಂದ್ರ ಮೋದಿ, “ಪ್ರತಿ ಭಾರತೀಯ ಪ್ರಜೆಯೂ ಒಗ್ಗಟ್ಟಾಗಿ ನಿಲ್ಲಬೇಕು” ಎಂದು ಕರೆ ನೀಡಿದ್ದಾರೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆ ವಹಿಸಿದ್ದ ಸರ್ವಪಕ್ಷಗಳ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಿದ್ದರು.

ಕಾಂಗ್ರೆಸ್ ಪರವಾಗಿ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತರಿದ್ದರೆ, ತೃಣಮೂಲ ಕಾಂಗ್ರೆಸ್ ಪಕ್ಷದ ಪರವಾಗಿ ಸಂದೀಪ್ ಬಂಡೋಪಾಧ್ಯಾಯ್ ಹಾಗೂ ಡಿಎಂಕೆ ಪರವಾಗಿ ಟಿ.ಆರ್.ಬಾಲು ಸಭೆಯಲ್ಲಿ ಹಾಜರಿದ್ದರು. ಇವರೊಂದಿಗೆ, ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್, ಆಪ್ ಪಕ್ಷದ ಸಂಜಯ್ ಸಿಂಗ್, ಶಿವಸೇನೆ(ಉದ್ಧವ್ ಬಣ)ಯ ಸಂಜಯ್ ರಾವತ್, ಎನ್ಸಿಪಿ(ಎಸ್ಪಿ)ಯ ಸುಪ್ರಿಯಾ ಸುಳೆ, ಎಐಎಂಐಎಂನ ಅಸದುದ್ದೀನ್ ಉವೈಸಿ ಹಾಗೂ ಬಿಜೆಡಿಯ ಸಸ್ಮಿತ್ ಪಾತ್ರ ಕೂಡಾ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News