ಆಪರೇಷನ್ ಸಿಂಧೂರ | ಭಾರತದ ಕ್ಷಿಪಣಿಗಳು ಪಾಕಿಸ್ತಾನದೊಳಗೆ 300 ಕಿ.ಮೀ. ನುಗ್ಗಿ ದಾಳಿ ನಡೆಸಿದ್ದವು : ಐಎಎಫ್ ಮುಖ್ಯಸ್ಥ ಅಮರಪ್ರೀತ್ ಸಿಂಗ್
ಅಮರಪ್ರೀತ್ ಸಿಂಗ್ | Photo Credit : PTI
ಹೊಸದಿಲ್ಲಿ,ಅ.3: ‘ಆಪರೇಷನ್ ಸಿಂಧೂರ’ ಅನ್ನು ವರ್ಷದ ಅತ್ಯಂತ ಮಹತ್ವದ ಕಾರ್ಯಾಚರಣೆ ಎಂದು ಬಣ್ಣಿಸಿರುವ ಚೀಫ್ ಏರ್ ಮಾರ್ಷಲ್ ಅಮರಪ್ರೀತ್ ಸಿಂಗ್ ಅವರು, ಅದು ಭಾರತದ ಬಲಿಷ್ಠ ವಾಯು ರಕ್ಷಣಾ ಸಾಮರ್ಥ್ಯಗಳು ಮತ್ತು ಸಶಸ್ತ್ರ ಪಡೆಗಳ ಜಂಟಿ ಯೋಜನೆಯನ್ನು ಪ್ರದರ್ಶಿಸಿದೆ ಎಂದು ಹೇಳಿದ್ದಾರೆ.
ಅ.8ರಂದು ಹಿಂಡನ್ ವಾಯುನೆಲೆಯಲ್ಲಿ ವಾಯುಪಡೆ ದಿನಾಚರಣೆ ಪರೇಡ್‌ಗೆ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ದೀರ್ಘ ವ್ಯಾಪ್ತಿಯ ಭೂಮಿಯಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿ(ಎಸ್‌ಎಎಂ)ಗಳು ನಿರ್ಣಾಯಕ ಪಾತ್ರವನ್ನು ಹೊಂದಿದ್ದವು, ನಮ್ಮ ಕ್ಷಿಪಣಿಗಳು ಪಾಕಿಸ್ತಾನದ ಭೂಪ್ರದೇಶದಲ್ಲಿ 300 ಕಿ.ಮಿ.ಗೂ ಹೆಚ್ಚು ಒಳಕ್ಕೆ ನುಗ್ಗಿದ್ದು ನಮ್ಮ ಅತ್ಯುತ್ತಮ ಸಾಧನೆಯಾಗಿತ್ತು. ನಮ್ಮ ಬಲಿಷ್ಠ ವಾಯು ರಕ್ಷಣಾ ಮೂಲಸೌಕರ್ಯವು ಸಂಘರ್ಷದ ಸ್ವರೂಪವನ್ನೇ ಬದಲಿಸಿತ್ತು’ ಎಂದು ಹೇಳಿದರು.
‘ಆಪರೇಷನ್ ಸಿಂಧೂರ’ ತನ್ನ ನಿಖರತೆ ಮತ್ತು ಪರಿಣಾಮದಿಂದಾಗಿ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಲಿದೆ ಎಂದು ಹೇಳಿದ ಅವರು, ‘ಕನಿಷ್ಠ ಸಾವುನೋವುಗಳೊಂದಿಗೆ ನಿಖರವಾಗಿ ದಾಳಿ ನಡೆಸಲು ಮತ್ತು ಆಪರೇಷನ್ ಸಿಂಧೂರದ ಒಂದೇ ರಾತ್ರಿಯಲ್ಲಿ ಪಾಕಿಸ್ತಾನವು ಮಂಡಿಯೂರುವಂತೆ ಮಾಡಲು ನಮಗೆ ಸಾಧ್ಯವಾಗಿತ್ತು’ಎಂದರು. ಅದು 1971ರ ನಂತರದ ಬಹು ದೊಡ್ಡ ವಿನಾಶಕಾರಿ ಕಾರ್ಯಾಚರಣೆಯಾಗಿತ್ತು ಎಂದು ಅವರು ಹೇಳಿದರು.
ಜಂಟಿಯಾಗಿ ಯೋಜನೆಗಳನ್ನು ರೂಪಿಸಿ ದಾಳಿಗಳನ್ನು ನಡೆಸಿದ್ದಕ್ಕಾಗಿ ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಹೆಗ್ಗಳಿಕೆಯನ್ನು ನೀಡಿದ ಸಿಂಗ್, ‘ಆಪರೇಷನ್ ಸಿಂಧೂರದಲ್ಲಿ ನಾವು ದೋಷರಹಿತ, ಅಭೇದ್ಯ ಮತ್ತು ನಿಖರ ದಾಳಿಗಳನ್ನು ಸಂಯೋಜಿಸುವ ಮೂಲಕ ನಮ್ಮ ಸಾಮರ್ಥ್ಯವನ್ನು ಸಾಬೀತುಗೊಳಿಸಿದ್ದೇವೆ ’ ಎಂದರು.
ಕಾರ್ಯಾಚರಣೆಯ ಸಂದರ್ಭದಲ್ಲಿ ತಪ್ಪು ಮಾಹಿತಿಗಳನ್ನು ಎದುರಿಸುವಲ್ಲಿ ಮಾಧ್ಯಮಗಳ ಪಾತ್ರವನ್ನು ಒತ್ತಿ ಹೇಳಿದ ಅವರು, ‘ತಪ್ಪು ಮಾಹಿತಿಗಳ ಮಹಾಪೂರವೇ ಇತ್ತು, ಆದರೆ ನಮ್ಮ ಮಾಧ್ಯಮಗಳು ಪಡೆಗಳಿಗೆ ಬಹಳಷ್ಟು ಸಹಾಯವನ್ನು ಮಾಡಿದ್ದವು. ಯೋಧರು ಹೋರಾಡುತ್ತಿರುವಾಗ ಸಾರ್ವಜನಿಕ ನೈತಿಕ ಸ್ಥೈರ್ಯಕ್ಕೆ ಧಕ್ಕೆಯಾಗಬಾರದು ಮತ್ತು ಸುದ್ದಿವಾಹಿನಿಗಳು ಅದನ್ನು ಖಚಿತಪಡಿಸಿದ್ದವು ’ ಎಂದರು.
ಭವಿಷ್ಯದ ಕುರಿತು ಮಾತನಾಡಿದ ಸಿಂಗ್,‘ ಭವಿಷ್ಯದ ಯುದ್ಧಗಳು ಹಿಂದಿನ ಯುದ್ಧಗಳಿಗಿಂತ ಭಿನ್ನವಾಗಿರಲಿವೆ. ನಾವು ನಮ್ಮ ಚಿಂತನೆಯನ್ನು ಸದಾ ಜೀವಂತವಾಗಿಸಿರಬೇಕು, ಪ್ರಸ್ತುತ ಮತ್ತು ಭವಿಷ್ಯದ ಯುದ್ಧಗಳಿಗೆ ಸನ್ನದ್ಧರಾಗಿರಬೇಕು ಹಾಗೂ ಎಲ್ಲ ಪಡೆಗಳು ಮತ್ತು ಏಜೆನ್ಸಿಗಳೊಂದಿಗೆ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಬೇಕು ’ ಎಂದು ಹೇಳಿದರು.
ಐಎಎಫ್‌ನ ಮಾರ್ಗಸೂಚಿಯಲ್ಲಿ ಆತ್ಮ ನಿರ್ಭರತೆ ಕೇಂದ್ರ ಬಿಂದುವಾಗಿದೆ ಎಂದ ಅವರು,‘ಎಲ್‌ಸಿಎ ಎಂಕೆ1ಎ ಯುದ್ಧವಿಮಾನಗಳಿಗಾಗಿ ಬೇಡಿಕೆಗಳನ್ನು ಸಲ್ಲಿಸಲಾಗಿದೆ. ಎಲ್‌ಸಿಎ ಎಂಕೆ2 ಮತ್ತು ಇಂಡಿಯನ್ ಮಲ್ಟಿ-ರೋಲ್ ಹೆಲಿಕಾಪ್ಟರ್ ಯೋಜನೆಗಳು ಪ್ರಗತಿಯಲ್ಲಿವೆ. ವಿವಿಧ ರಾಡಾರ್‌ಗಳು, ಸಿಸ್ಟಮ್‌ಗಳು ಮತ್ತು ಸ್ವದೇಶಿ ಆವಿಷ್ಕಾರಗಳು ಅಭಿವೃದ್ಧಿಯ ಹಂತದಲ್ಲಿವೆ. ನಾವು ಸ್ವಾವಲಂಬನೆಯತ್ತ ಮುನ್ನಡೆಯುತ್ತೇವೆ. ಆದರೆ ಅಗತ್ಯವಿದ್ದರೆ ನಿರ್ಣಾಯಕ ಕೊರತೆಯನ್ನು ತ್ವರಿತವಾಗಿ ನೀಗಿಸಲು ವ್ಯೆಹಾತ್ಮಕ ತಂತ್ರಜ್ಞಾನವನ್ನು ಪಡೆದುಕೊಳ್ಳುತ್ತೇವೆ ’ಎಂದರು.
ಯುಎಇ, ಈಜಿಪ್ಟ್, ಫ್ರಾನ್ಸ್ ಮತ್ತು ಸಿಂಗಾಪುರದಂತಹ ದೇಶಗಳೊಂದಿಗೆ ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಸಮರಾಭ್ಯಾಸಗಳನ್ನು ಉಲ್ಲೇಖಿಸಿದ ಸಿಂಗ್, ವಿದೇಶಿ ಕಮಾಂಡರ್‌ಗಳು ಜಂಟಿ ಸಮರಾಭ್ಯಾಸಗಳನ್ನು ಮುಂದುವರಿಸಲು ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ ಎಂದರು.