×
Ad

‘ಆಪರೇಷನ್ ಸಿಂಧೂರʼ | ಸುದ್ದಿಗೋಷ್ಠಿಯ ಮುಂಚೂಣಿಯಲ್ಲಿದ್ದ ಕರ್ನಲ್ ಸೋಫಿಯಾ ಕುರೇಶಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್‌ಗೆ ಜನರಿಂದ ಪ್ರಶಂಸೆಗಳ ಸುರಿಮಳೆ

Update: 2025-05-07 22:36 IST

ಸೋಫಿಯಾ ಕುರೇಷಿ, ವ್ಯೋಮಿಕಾ ಸಿಂಗ್ | PTI

ಹೊಸದಿಲ್ಲಿ: ಎ.22ರಂದು ಜಮ್ಮುಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಪ್ರವಾಸಿಗಳ ಮೇಲೆ ಭಯೋತ್ಪಾದಕ ದಾಳಿಗೆ ಉತ್ತರವಾಗಿ ಭಾರತವು ನಿನ್ನೆ ರಾತ್ರಿ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ‘ಆಪರೇಷನ್ ಸಿಂಧೂರ’ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ ಮಿಸ್ರಿ ಅವರ ಜೊತೆಗೆ ಮುಂಚೂಣಿಯಲ್ಲಿದ್ದ ಇಬ್ಬರು ಹಿರಿಯ ಮಹಿಳಾ ಅಧಿಕಾರಿಗಳಾದ ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಕುರೇಶಿ ಮತ್ತು ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗಳ ಸುರಿಮಳೆಯೇ ಹರಿದು ಬಂದಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 26 ಜನರು ಕೊಲ್ಲಲ್ಪಟ್ಟಿದ್ದರು.

ಜಗತ್ತಿಗೆ ಬಲವಾದ ಸಂದೇಶವೊಂದನ್ನು ರವಾನಿಸಿರುವ ಸುದ್ದಿಗೋಷ್ಠಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕಾಗಿ ಕುರೇಶಿ ಮತ್ತು ಸಿಂಗ್ ಅವರನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಶ್ಲಾಘಿಸಿದ್ದಾರೆ.

ಓರ್ವ ಬಳಕೆದಾರರು ‘ಆಪರೇಷನ್ ಸಿಂಧೂರ’ ಮೂಲಕ ಭಾರತವು ಪಾಕಿಸ್ತಾನಕ್ಕೆ ಭಾರೀ ಹೊಡೆತವನ್ನು ನೀಡಿದ ಬಳಿಕ ಎರಡು ವಿಭಿನ್ನ ಧರ್ಮಗಳ ಇಬ್ಬರು ಮಹಿಳಾ ಅಧಿಕಾರಿಗಳು ರಾಷ್ಟ್ರವನ್ನುದ್ದೇಶಿಸಿ ಮಾತನಾಡಲು ಸುದ್ದಿಗೋಷ್ಠಿಯಲ್ಲಿ ಒಟ್ಟಾಗಿ ಬಂದಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳಿಂದ ಎಂತಹ ಅದ್ಭುತ ಸಂದೇಶ,ಅತ್ಯಂತ ಪರಿಪೂರ್ಣ. ಇದು ಪಹಲ್ಗಾಮ್ ಬಳಿಕ ಭಯೋತ್ಪಾದಕರು ಮುರಿಯಲು ಬಯಸಿದ್ದ ಏಕತೆ,ಆದರೆ ಅವರು ಈ ಏಕತೆಯನ್ನು ಇನ್ನಷ್ಟು ಬಲಗೊಳಿಸಿದ್ದಾರೆ ಎಂದು ಬರೆದಿದ್ದಾರೆ.

‘‘ಎರಡು ವಿಭಿನ್ನ ಧರ್ಮಗಳ ಇಬ್ಬರು ಮಹಿಳಾ ಅಧಿಕಾರಿಗಳಾದ ಕರ್ನಲ್ ಸೋಫಿಯಾ ಕುರೇಶಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ‘ಆಪರೇಷನ್ ಸಿಂಧೂರ’ ಪತ್ರಿಕಾಗೋಷ್ಠಿಯನ್ನು ನಡೆಸುವ ಮೂಲಕ ಅತ್ಯುತ್ತಮ ಸಂದೇಶವನ್ನು ರವಾನಿಸಿದ್ದಾರೆ’ ಎಂದು ಇನ್ನೋರ್ವ ಎಕ್ಸ್ ಬಳಕೆದಾರ ಪೋಸ್ಟ್ ಮಾಡಿದ್ದಾರೆ.

ಕರ್ನಲ್ ಸೋಫಿಯಾ ಕುರೇಶಿ ಯಾರು?:

ಭಾರತೀಯ ಸೇನೆಯ ಕಾರ್ಪ್ಸ್ ಆಫ್ ಸಿಗ್ನಲ್ಸ್‌ನ ಅತ್ಯಂತ ಗೌರವಾನ್ವಿತ ಅಧಿಕಾರಿಯಾಗಿರುವ ಕರ್ನಲ್ ಸೋಫಿಯಾ ಕುರೇಶಿ ಬಲವಾದ ಮಿಲಿಟರಿ ಹಿನ್ನೆಲೆಯನ್ನು ಹೊಂದಿದ್ದಾರೆ. 2016ರಲ್ಲಿ ಮಿಲಿಟರಿ ಸಮರಾಭ್ಯಾಸದಲ್ಲಿ ಭಾರತೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿಯಾಗಿ ಅವರು ಇತಿಹಾಸವನ್ನು ಸೃಷ್ಟಿಸಿದ್ದರು. ಅದು ಆ ಸಮಯದಲ್ಲಿ ಭಾರತವು ಆಯೋಜಿಸಿದ್ದ ಅತಿ ದೊಡ್ಡ ಮಿಲಿಟರಿ ಕವಾಯತು ಆಗಿದ್ದು,ಭಾಗವಹಿಸಿದ್ದ 18 ದೇಶಗಳ ಪೈಕಿ ಕುರೇಶಿ ಏಕೈಕ ಮಹಿಳಾ ಕಮಾಂಡರ್ ಆಗಿದ್ದರು.

ಮೂಲತ ಗುಜರಾತಿನವರಾಗಿರುವ ಕುರೇಶಿ ಜೀವರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. 1999ರಲ್ಲಿ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡಮಿಯಿಂದ ಲೆಫ್ಟಿನಂಟ್ ಆಗಿ ಸೇನೆಗೆ ಸೇರ್ಪಡೆಗೊಂಡಿದ್ದರು.

ಮಿಲಿಟರಿ ಬೇರುಗಳನ್ನು ಹೊಂದಿರುವ ಕುಟುಂಬದಿಂದ ಬಂದಿರುವ ಅವರ ಅಜ್ಜ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಕುರೇಶಿಯವರ ಪತಿ ಯಾಂತ್ರೀಕೃತ ಪದಾತಿ ದಳದಲ್ಲಿ ಅಧಿಕಾರಿಯಾಗಿದ್ದಾರೆ.

ಕುರೇಶಿ 2006ರಲ್ಲಿ ಕಾಂಗೋದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.

ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಯಾರು?:

ವಿಂಗ್ ಕಮಾಂಡರ್ ಸಿಂಗ್ ಅವರು ಇಂಜಿನಿಯರಿಂಗ್ ಶಿಕ್ಷಣವನ್ನು ಮುಗಿಸಿದ್ದು ಎನ್‌ಸಿಸಿಗೆ ಸೇರ್ಪಡೆಗೊಂಡಿದ್ದರು. ಅವರು ಕೆಲವು ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ಚೇತಕ್ ಮತ್ತು ಚೀತಾ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸಿದ್ದಾರೆ. 2019ರಲ್ಲಿ ಅವರನ್ನು ಭಾರತೀಯ ವಾಯುಪಡೆಯಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿ ನಿಯೋಜಿಸಲಾಗಿತ್ತು ಮತ್ತು ಫ್ಲೈಯಿಂಗ್ ಬ್ರ್ಯಾಂಚ್‌ನಲ್ಲಿ ಪರ್ಮನೆಂಟ್ ಕಮಿಷನ್ ಪಡೆದಿದ್ದರು.

2020ರಲ್ಲಿ ಅರುಣಾಚಲ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನದ ನಡುವೆ ಹೆಚ್ಚಿನ ಎತ್ತರದಲ್ಲಿ ಪ್ರಮುಖ ಕಾರ್ಯಾಚರಣೆಯೊಂದನ್ನು ಅವರು ಮುನ್ನಡೆಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News