×
Ad

‘ಆಪರೇಷನ್ ಸಿಂಧೂರ’ ಕುರಿತು ಪೋಸ್ಟ್ ಮಾಡಿದ ವಿದ್ಯಾರ್ಥಿನಿಯ ಬಂಧನ; ಮಹಾರಾಷ್ಟ್ರ ಸರಕಾರವನ್ನು ಟೀಕಿಸಿದ ಬಾಂಬೆ ಹೈಕೋರ್ಟ್

Update: 2025-05-27 20:42 IST

ಬಾಂಬೆ ಹೈಕೋರ್ಟ್ | PC : PTI 

ಮುಂಬೈ: ‘ಆಪರೇಷನ್ ಸಿಂಧೂರ’ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಗಾಗಿ ಪುಣೆಯ ವಿದ್ಯಾರ್ಥಿನಿಯೋರ್ವಳನ್ನು ಬಂಧಿಸಿದ್ದಕ್ಕಾಗಿ ಬಾಂಬೆ ಉಚ್ಚ ನ್ಯಾಯಾಲಯವು ಮಂಗಳವಾರ ಮಹಾರಾಷ್ಟ್ರ ಸರಕಾರವನ್ನು ಕಟುವಾಗಿ ಟೀಕಿಸಿದೆ.

ಜಾಮೀನು ಅರ್ಜಿಯನ್ನು ಸಲ್ಲಿಸುವಂತೆ ವಿದ್ಯಾರ್ಥಿನಿಯ ಪರ ವಕೀಲರಿಗೆ ಸೂಚಿಸಿದ ನ್ಯಾಯಮೂರ್ತಿಗಳಾದ ಗೌರಿ ಗೋಡ್ಸೆ ಮತ್ತು ಸೋಮಶೇಖರ ಸುಂದರೇಶನ್ ಅವರ ವಿಭಾಗೀಯ ಪೀಠವು, ಜಾಮೀನನ್ನು ತಕ್ಷಣ ಮಂಜೂರು ಮಾಡುವುದಾಗಿ ತಿಳಿಸಿತು.

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಗಾಗಿ 19ರ ಹರೆಯದ ವಿದ್ಯಾರ್ಥಿನಿಯನ್ನು ಹೊರಹಾಕಿದ್ದಕ್ಕಾಗಿ ಆಕೆಯ ಕಾಲೇಜನ್ನೂ ಟೀಕಿಸಿದ ಪೀಠವು,ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ನೆರವಾಗಬೇಕೇ ಹೊರತು ಅವರನ್ನು ಕ್ರಿಮಿನಲ್‌ ಗಳಾಗಿ ಪರಿವರ್ತಿಸಬಾರದು ಎಂದು ಹೇಳಿತು.

ತನ್ನನ್ನು ಕಾಲೇಜಿನಿಂದ ಡಿಬಾರ್ ಮಾಡಿದ್ದನ್ನು ಪ್ರಶ್ನಿಸಿ ವಿದ್ಯಾರ್ಥಿನಿಯು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ಪೀಠವು, ಕಾಲೇಜಿನಿಂದ ಡಿಬಾರ್ ಆದ ಬಳಿಕ ಅದರ ಪರಿಣಾಮಗಳನ್ನು ವಿದ್ಯಾರ್ಥಿನಿ ಈಗಾಗಲೇ ಅನುಭವಿಸಿದ್ದಾಳೆ ಮತ್ತು ಅದರಿಂದ ಆಕೆಯನ್ನು ಮುಕ್ತಗೊಳಿಸಬೇಕಿದೆ ಎಂದು ಹೇಳಿತು.

ಸಾವಿತ್ರಿಬಾಯಿ ಫುಲೆ ಪುಣೆ ವಿವಿಯೊಂದಿಗೆ ಸಂಯೋಜಿತ ಖಾಸಗಿ ಅನುದಾನರಹಿತ ಸಿಂಹಗಡ ಅಕಾಡೆಮಿ ಆಫ್ ಇಂಜಿನಿಯರಿಂಗ್‌ ನಲ್ಲಿ ಎರಡನೇ ವರ್ಷದ ಮಾಹಿತಿ ತಂತ್ರಜ್ಞಾನ ವ್ಯಾಸಂಗವನ್ನು ಮಾಡುತ್ತಿರುವ ವಿದ್ಯಾರ್ಥಿನಿ ಮೇ 7ರಂದು ಭಾರತ ಸರಕಾರವನ್ನು ಟೀಕಿಸಿದ್ದ ಇನ್‌ ಸ್ಟಾಗ್ರಾಂ ಪೋಸ್ಟ್‌ ವೊಂದನ್ನು ಮರುಪೋಸ್ಟ್ ಮಾಡಿದ್ದಳು. ಈ ಪೋಸ್ಟ್ ‘ಆಪರೇಷನ್ ಸಿಂಧೂರ’ದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಗೆ ಸಂಬಂಧಿಸಿತ್ತು.

ಆನ್‌ಲೈನ್‌ನಲ್ಲಿ ಬೆದರಿಕೆಗಳನ್ನು ಸ್ವೀಕರಿಸಿದ ಬಳಿಕ ವಿದ್ಯಾರ್ಥಿನಿ ಪೋಸ್ಟ್‌ನ್ನು ಅಳಿಸಿದ್ದಳು ಮತ್ತು ಕ್ಷಮೆ ಯಾಚಿಸಿದ್ದಳು.

ಆದಾಗ್ಯೂ ವಿದ್ಯಾರ್ಥಿನಿಯ ವಿರುದ್ಧ ಪ್ರತಿಭಟನೆಗಳ ಬಳಿಕ ಮೇ 9ರಂದು ಆಕೆಯನ್ನು ಬಂಧಿಸಲಾಗಿತ್ತು ಮತ್ತು ಅದೇ ದಿನ ಆಕೆಯನ್ನು ಕಾಲೇಜಿನಿಂದ ಹೊರಹಾಕಲಾಗಿತ್ತು.

ಕಾಲೇಜು ತನ್ನ ಡಿಬಾರ್ ಪತ್ರದಲ್ಲಿ ವಿದ್ಯಾರ್ಥಿನಿಯು ಸಂಸ್ಥೆಗೆ ಅಪಖ್ಯಾತಿ ತಂದಿರುವುದರಿಂದ ಈ ಕ್ರಮವು ಸಮರ್ಥನೀಯವಾಗಿದೆ ಎಂದು ಹೇಳಿಕೊಂಡಿತ್ತು. ಆಕೆ ದೇಶವಿರೋಧಿ ಭಾವನೆಗಳನ್ನು ಹೊಂದಿದ್ದು, ಕ್ಯಾಂಪಸ್ ಸಮುದಾಯ ಮತ್ತು ಸಮಾಜಕ್ಕೆ ಅಪಾಯವನ್ನೊಡ್ಡಿದ್ದಳು ಎಂದು ಅದು ಆರೋಪಿಸಿತ್ತು.

ತನ್ನನ್ನು ಕಾಲೇಜಿನಿಂದ ಡಿಬಾರ್ ಮಾಡಿದ್ದು ತನ್ನ ಮೂಲಭೂತ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ವಾದಿಸಿದ್ದ ವಿದ್ಯಾರ್ಥಿನಿ, ಡಿಬಾರ್ ಮಾಡಿದ್ದನ್ನು ರದ್ದುಗೊಳಿಸಬೇಕು ಮತ್ತು ಮೇ 24ರಿಂದ ಪ್ರಾರಂಭವಾಗಲಿರುವ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಲು ತನಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಳು.

ಮಂಗಳವಾರ ವಿಚಾರಣೆ ಸಂದರ್ಭದಲ್ಲಿ ನ್ಯಾ.ಗೋಡ್ಸೆ ಅವರು ಕಾಲೇಜು ಕೈಗೊಂಡ ಕ್ರಮವನ್ನು ಮೌಖಿಕವಾಗಿ ಪ್ರಶ್ನಿಸಿದರು.

‘ನೀವು ಓರ್ವ ವಿದ್ಯಾರ್ಥಿನಿಯ ಜೀವನವನ್ನು ಹಾಳು ಮಾಡುತ್ತೀರಾ?’ ಎಂದು ಕಾಲೇಜನ್ನು ಪ್ರತಿನಿಧಿಸಿದ್ದ ವಕೀಲರನ್ನು ಪ್ರಶ್ನಿಸಿದ ಅವರು,‘ಇದು ಯಾವ ರೀತಿಯ ನಡವಳಿಕೆ? ಯಾರೋ ಏನನ್ನೋ ವ್ಯಕ್ತಪಡಿಸಿದ್ದಾರೆಂದು ನೀವು ವಿದ್ಯಾರ್ಥಿನಿಯ ಜೀವನವನ್ನು ಹಾಳು ಮಾಡಲು ಬಯಸಿದ್ದೀರಾ? ನೀವು ಡಿಬಾರ್ ಮಾಡಲು ಹೇಗೆ ಸಾಧ್ಯ? ನೀವು ವಿದ್ಯಾರ್ಥಿನಿಯಿಂದ ವಿವರಣೆಯನ್ನು ಕೋರಿದ್ದೀರಾ?’ ಎಂದು ಪ್ರಶ್ನಿಸಿದರು.

ವಿದ್ಯಾರ್ಥಿನಿ ಪರೀಕ್ಷೆ ಬರೆಯುವುದನ್ನು ಕಾಲೇಜು ತಡೆಯಲು ಸಾಧ್ಯವಿಲ್ಲ. ಆಕೆ ಉಳಿದಿರುವ ಮೂರು ಪರೀಕ್ಷೆಗಳನ್ನು ಬರೆಯಲಿ ಎಂದು ನ್ಯಾ.ಗೋಡ್ಸೆ ಹೇಳಿದರು.

ವಿದ್ಯಾರ್ಥಿನಿಯ ಸಾಮಾಜಿಕ ಮಾಧ್ಯಮ ಪೋಸ್ಟ್ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿತ್ತು ಎಂದು ರಾಜ್ಯ ಸರಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಸರಕಾರಿ ವಕೀಲ ಪ್ರಿಯಭೂಷಣ ಕಾಕಡೆಯವರು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು, ತನ್ನ ತಪ್ಪನ್ನು ಅರಿತುಕೊಡು ಕ್ಷಮೆಯನ್ನು ಯಾಚಿಸಿರುವ ವಿದ್ಯಾರ್ಥಿನಿಯ ಪೋಸ್ಟ್‌ ನಿಂದ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆಯಾಗುವುದಿಲ್ಲ ಎಂದು ಹೇಳಿತು.

ಸರಕಾರವು ಓರ್ವ ವಿದ್ಯಾರ್ಥಿನಿಯನ್ನು ಈ ರೀತಿಯಲ್ಲಿ ಹೇಗೆ ಬಂಧಿಸಬಹುದು? ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತ

ಪಡಿಸುವುದನ್ನು ನಿಲ್ಲಿಸಬೇಕು ಎಂದು ಸರಕಾರವು ಬಯಸಿದೆಯೇ? ಸರಕಾರದಿಂದ ಇಂತಹ ಮೂಲಭೂತ ಪ್ರತಿಕ್ರಿಯೆಯು ವ್ಯಕ್ತಿಯನ್ನು ಇನ್ನಷ್ಟು ಮೂಲಭೂತೀಕರಿಸುತ್ತದೆ ಎಂದು ನ್ಯಾಯಾಲಯವು ಚಾಟಿ ಬೀಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News