‘ಆಪರೇಷನ್ ಸಿಂಧೂರ’ದಲ್ಲಿ ಭಾಗಿಯಾಗಿದ್ದ ಬಿಎಸ್‌ಎಫ್ ನ 16 ಯೋಧರಿಗೆ ಶೌರ್ಯಪದಕ
ಹೊಸದಿಲ್ಲಿ,ಆ.14: ‘ಆಪರೇಷನ್ ಸಿಂಧೂರ’ ಸಂದರ್ಭದಲ್ಲಿ ಗಮನಾರ್ಹ ಶೌರ್ಯ ಮತ್ತು ಅಸಾಧಾರಣ ಧೈರ್ಯವನ್ನು ಪ್ರದರ್ಶಿಸಿದ್ದಕ್ಕಾಗಿ ಗಡಿ ರಕ್ಷಣಾ ಪಡೆ(ಬಿಎಸ್‌ಎಫ್)ಯ 16 ಸಿಬ್ಬಂದಿಗಳಿಗೆ ಶೌರ್ಯ ಪದಕಗಳನ್ನು ಘೋಷಿಸಲಾಗಿದೆ.
ದೇಶದ ಪಶ್ಚಿಮ ಭಾಗದಲ್ಲಿ ಭಾರತ-ಪಾಕಿಸ್ತಾನ ಗಡಿಯನ್ನು ಕಾಯುವ ಜವಾಬ್ದಾರಿಯನ್ನು ಬಿಎಸ್‌ಎಫ್ ನಿರ್ವಹಿಸುತ್ತಿದೆ.
ಈ ಸ್ವಾತಂತ್ರ್ಯದಿನದಂದು 16 ಧೀರ ಸೀಮಾ ಪ್ರಹರಿಗಳಿಗೆ(ಗಡಿ ಕಾವಲುಗಾರರು) ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಅವರ ಗಮನಾರ್ಹ ಶೌರ್ಯ ಮತ್ತು ಅಸಾಧಾರಣ ಧೈರ್ಯಕ್ಕಾಗಿ,ಕರ್ತವ್ಯ ನಿರ್ವಹಣೆಯಲ್ಲಿ ದೃಢನಿಶ್ಚಯ ಮತ್ತು ಅಚಲತೆಗಾಗಿ ಶೌರ್ಯ ಪದಕಗಳನ್ನು ಪ್ರದಾನಿಸಲಾಗುವುದು ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿರುವ ಬಿಎಸ್‌ಎಫ್,ಈ ಪದಕಗಳು ಗಡಿ ಭದ್ರತಾ ಪಡೆಯ ಮೇಲೆ ದೇಶವು ಹೊಂದಿರುವ ನಂಬಿಕೆಗೆ ಸಾಕ್ಷಿಯಾಗಿವೆ ಎಂದು ಹೇಳಿದೆ.
ಪದಕ ವಿಜೇತರಲ್ಲಿ ಓರ್ವ ಡೆಪ್ಯೂಟಿ ಕಮಾಂಡಂಟ್ ದರ್ಜೆಯ ಅಧಿಕಾರಿ, ಇಬ್ಬರು ಸಹಾಯಕ ಕಮಾಂಡಂಟ್ ಗಳು ಮತ್ತು ಓರ್ವ ಇನ್ಸ್‌ಪೆಕ್ಟರ್ ಸೇರಿದ್ದಾರೆ.