ಆಪರೇಶನ್ ಸಿಂಧೂರ್ | ಭಾರತ–ಪಾಕ್ ನಡುವೆ ಮಧ್ಯಸ್ಥಿಕೆ; ಚೀನಾದ ಹೇಳಿಕೆಯನ್ನು ಕೇಂದ್ರ ಖಂಡಿಸಲಿ: ಉವೈಸಿ ಆಗ್ರಹ
ಅಸಾದುದ್ದೀನ್ ಉವೈಸಿ | Photo Credit : PTI
ಹೊಸದಿಲ್ಲಿ, ಜ. 1: ಆಪರೇಶನ್ ಸಿಂಧೂರ್ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ಸಂಧಾನ ಏರ್ಪಡಿಸಲು ಚೀನಾ ಮಧ್ಯಸ್ಥಿಕೆ ವಹಿಸಿತ್ತೆಂಬ ಚೀನಿ ವಿದೇಶಾಂಗ ಸಚಿವರ ಹೇಳಿಕೆ ಭಾರತಕ್ಕೆ ಆಗಿರುವ ಮುಖಭಂಗವಾಗಿದ್ದು, ಅದನ್ನು ಕೇಂದ್ರ ಸರಕಾರ ಖಂಡಿಸಬೇಕೆಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಹಾಗೂ ಲೋಕಸಭಾ ಸದಸ್ಯ ಅಸಾದುದ್ದೀನ್ ಉವೈಸಿ ಆಗ್ರಹಿಸಿದ್ದಾರೆ.
ಭಾರತದ ಗೌರವ ಅಥವಾ ಸಾರ್ವಭೌಮತೆಯ ಬೆಲೆ ತೆತ್ತು ಚೀನಾದೊಂದಿಗೆ ಬಾಂಧವ್ಯವನ್ನು ಸಹಜ ಸ್ಥಿತಿಗೆ ತರಬೇಕಾಗಿಲ್ಲವೆಂದು ಅವರು ಹೇಳಿದರು.
‘‘ಭಾರತ–ಪಾಕ್ ಸಂಘರ್ಷದ ನಡುವೆ ಕದನವಿರಾಮವನ್ನು ತಾನು ಏರ್ಪಡಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ ಹಾಗೂ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ವಾಣಿಜ್ಯ ನಿರ್ಬಂಧಗಳನ್ನು ತಾನು ಬಳಸಿದ್ದಾಗಿಯೂ ಅವರು ಹೇಳಿಕೊಂಡಿದ್ದಾರೆ. ಇದೀಗ ಚೀನಾದ ವಿದೇಶಾಂಗ ಸಚಿವರೂ ಅಧಿಕೃತವಾಗಿ ಇಂತಹದ್ದೇ ಹೇಳಿಕೆಗಳನ್ನು ನೀಡಿದ್ದಾರೆ. ಇದು ಭಾರತಕ್ಕಾದ ಮುಖಭಂಗವಾಗಿದೆ. ಕೇಂದ್ರ ಸರಕಾರವು ಚೀನಾದ ಈ ಹೇಳಿಕೆಯನ್ನು ಅಧಿಕೃತವಾಗಿ ತಿರಸ್ಕರಿಸಬೇಕು ಹಾಗೂ ತೃತೀಯ ಪಕ್ಷದ ಯಾವುದೇ ಮಧ್ಯಸ್ಥಿಕೆಯ ಅಗತ್ಯವಿಲ್ಲವೆಂದು ದೇಶಕ್ಕೆ ಭರವಸೆ ನೀಡಬೇಕು’’ ಎಂದು ಹೈದರಾಬಾದ್‌ನ ಸಂಸದರೂ ಆದ ಉವೈಸಿ ತಿಳಿಸಿದ್ದಾರೆ.
ಈ ವರ್ಷ ಚೀನಾ ಮಧ್ಯಸ್ಥಿಕೆ ವಹಿಸಿದ ಜ್ವಲಂತ ಸಮಸ್ಯೆಗಳ ಪೈಕಿ ಭಾರತ ಹಾಗೂ ಪಾಕಿಸ್ತಾನದ ನಡುವಿನ ಉದ್ವಿಗ್ನತೆಯೂ ಒಂದಾಗಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಮಂಗಳವಾರ ಹೇಳಿಕೆ ನೀಡಿದ್ದರು.
ಭಾರತ ಹಾಗೂ ಪಾಕಿಸ್ತಾನ ನಡುವೆ ಈ ವರ್ಷದ ಆರಂಭದಲ್ಲಿ ಭುಗಿಲೆದ್ದ ಸೈನಿಕ ಸಂಘರ್ಷವನ್ನು ನಿಲ್ಲಿಸಲು ಅಮೆರಿಕ ಸೇರಿದಂತೆ ಯಾವುದೇ ತೃತೀಯ ದೇಶವು ಮಧ್ಯಸ್ಥಿಕೆ ವಹಿಸಿರುವುದನ್ನು ಭಾರತ ತಳ್ಳಿಹಾಕಿದೆ. ಕದನವಿರಾಮ ಏರ್ಪಡಿಸುವಂತೆ ಪಾಕಿಸ್ತಾನವೇ ಭಾರತವನ್ನು ಕೇಳಿಕೊಂಡಿತು ಎಂದು ಕೇಂದ್ರ ಸರಕಾರ ಹೇಳುತ್ತಲೇ ಬಂದಿದೆ.