ಭಾರತ-ಪಾಕ್ ಕದನ ವಿರಾಮದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪವಿರಲಿಲ್ಲ: ಎಸ್.ಜೈಶಂಕರ್
Photo: Sansad TV via PTI
ಹೊಸದಿಲ್ಲಿ,ಜು.30: ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಏರ್ಪಡುವಲ್ಲಿ ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವಿರಲಿಲ್ಲ ಬುಧವಾರ ಸ್ಪಷ್ಟವಾಗಿ ತಿಳಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿರುವಂತೆ ಮಿಲಿಟರಿ ಕಾರ್ಯಾಚರಣೆಯ ಸ್ಥಗಿತವು ವ್ಯಾಪಾರಕ್ಕೆ ಸಂಬಂಧಿಸಿರಲಿಲ್ಲ ಎಂದು ಒತ್ತಿ ಹೇಳಿದರು.
ರಾಜ್ಯಸಭೆಯಲ್ಲಿ ಆಪರೇಷನ್ ಸಿಂಧೂರ ಕುರಿತು ವಿಶೇಷ ಚರ್ಚೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಜೈಶಂಕರ್, ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದ ಎ.22ರಿಂದ ಜೂ.16ರವರೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ನಡುವೆ ಯಾವುದೇ ದೂರವಾಣಿ ಮಾತುಕತೆಗಳು ನಡೆದಿರಲಿಲ್ಲ ಎಂದು ಹೇಳಿದರು.
ವ್ಯಾಪಾರ ಬೆದರಿಕೆಯನ್ನು ಬಳಸಿಕೊಂಡು ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಲು ತಾನು ಮಧ್ಯಸ್ಥಿಕೆ ವಹಿಸಿದ್ದೆ ಎಂಬ ಟ್ರಂಪ್ ಹೇಳಿಕೆಗಳ ಕುರಿತು ಪ್ರತಿಪಕ್ಷಗಳು ಸರಕಾರದ ವಿರುದ್ಧ ದಾಳಿ ನಡೆಸುತ್ತಿವೆ.
ಭಾರತವು ಯಾವುದೇ ಗಡಿಯಾಚೆಯ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಮತ್ತು ಆಪರೇಷನ್ ಸಿಂಧೂರ ಕೈಗೊಳ್ಳುವ ಮೂಲಕ ಪಾಕಿಸ್ತಾನಕ್ಕೆ ಉತ್ತರಿಸಿದೆ ಹಾಗೂ ಅದನ್ನು ಮುಂದುವರಿಸುತ್ತದೆ ಎಂದು ಜೈಶಂಕರ್ ಹೇಳಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯು ಎಳ್ಳಷ್ಟೂ ಸ್ವೀಕಾರಾರ್ಹವಾಗಿರಲಿಲ್ಲ ಎಂದು ಒತ್ತಿ ಹೇಳಿದ ಅವರು, ಪಾಕಿಸ್ತಾನವು ಲಕ್ಷಣ ರೇಖೆಯನ್ನು ಅತಿಕ್ರಮಿಸಿತ್ತು ಮತ್ತು ಅಲ್ಲಿ ಪಾರದರ್ಶಕತೆ ಮತ್ತು ನ್ಯಾಯ ಅಗತ್ಯವಾಗಿತ್ತು ಎಂದರು.
ರಕ್ತ ಮತ್ತು ನೀರು ಜೊತೆಯಾಗಿ ಹರಿಯುವುದಿಲ್ಲ ಎಂದ ಅವರು, ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದ ಭಾರತದ ನಿರ್ಧಾರಕ್ಕೆ ಕಾರಣಗಳನ್ನು ಒದಗಿಸಿದರು.
ಮೋದಿ ಸರಕಾರವು ಒಪ್ಪಂದವನ್ನು ಅಮಾನತುಗೊಳಿಸುವ ಮೂಲಕ ನೆಹರೂ ನೀತಿಗಳ ತಪ್ಪುಗಳನ್ನು ಸರಿಪಡಿಸಿದೆ. ಆಗಿನ ಪ್ರಧಾನಿ ಜವಾಹರಲಾಲ ನೆಹರೂ ಅವರು ಸಹಿ ಮಾಡಿದ್ದ ಒಪ್ಪಂದವು ಶಾಂತಿಗಾಗಿ ಆಗಿರಲಿಲ್ಲ,ತುಷ್ಟೀಕರಣಕ್ಕಾಗಿ ಆಗಿತ್ತು ಎಂದರು.
ಮೋದಿ ಸರಕಾರದ ಪ್ರಯತ್ನಗಳಿಂದಾಗಿ ಮಾತ್ರ ಈಗ ಭಯೋತ್ಪಾದನೆ ಜಾಗತಿಕ ಅಜೆಂಡಾದಲ್ಲಿದೆ ಎಂದು ಹೇಳಿದ ಜೈಶಂಕರ್, ಭಾರತವು ಹಣಕಾಸು ಕ್ರಿಯಾ ಕಾರ್ಯಪಡೆ ಪ್ರಕ್ರಿಯೆಯ ಮೂಲಕ ಪಾಕಿಸ್ತಾನದ ಮೇಲೆ ಭಾರೀ ಒತ್ತಡವನ್ನು ಹೇರಿತ್ತು ಮತ್ತು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯನಲ್ಲದಿದ್ದರೂ ದಿ ರಸಿಸ್ಟನ್ಸ್ ಫ್ರಂಟ್(ಟಿಆರ್ಎಫ್) ಪಾಕಿಸ್ತಾನ ಮೂಲದ ಲಷ್ಕರೆ ತಯ್ಯಿಬ(ಎಲ್ಇಟಿ)ಯ ಛಾಯಾ ಗುಂಪು ಎಂದು ವಿಶ್ವಸಂಸ್ಥೆಯು ಘೋಷಿಸುವಂತೆ ಮಾಡಲು ಭಾರತಕ್ಕೆ ಸಾಧ್ಯವಾಗಿತ್ತು ಎಂದರು.
ಪಹಲ್ಗಾಮ್ ದಾಳಿಯ ಹೊಣೆಯನ್ನು ಟಿಆರ್ಎಫ್ ವಹಿಸಿಕೊಂಡಿತ್ತು.
ತನ್ನ ಒಂದು ಗಂಟೆಗೂ ಹೆಚ್ಚಿನ ಅವಧಿಯ ಭಾಷಣದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಮಿಲಿಟರಿ ಕಾರ್ಯಾಚರಣೆಯನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಕೆಲವು ಪ್ರತಿಪಕ್ಷ ನಾಯಕರನ್ನು ಕುಟುಕಿದ ಜೈಶಂಕರ್, ಅವರಿಗೆ ಯಾವುದೇ ಸಂಶಯವಿದ್ದರೆ ಅವರು ಪಾಕಿಸ್ತಾನದಲ್ಲಿ ಭಯೋತ್ಪಾದಕರ ಅಂತ್ಯಸಂಸ್ಕಾರದ ಮತ್ತು ಅಲ್ಲಿಯ ವಾಯುನೆಲೆಗಳ ನಾಶದ ವೀಡಿಯೊಗಳನ್ನು ವೀಕ್ಷಿಸಬೇಕು ಎಂದು ಹೇಳಿದರು.
ಕೆಲವು ಪ್ರತಿಪಕ್ಷ ಸದಸ್ಯರು ಜೈಶಂಕರ್ ಅವರ ಇತ್ತೀಚಿನ ಚೀನಾ ಭೇಟಿಯ ವಿಷಯವನ್ನೆತ್ತಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಭಯೋತ್ಪಾದನೆ, ಉದ್ವಿಗ್ನತೆ ನಿವಾರಣೆ ಮತ್ತು ವ್ಯಾಪಾರ ನಿರ್ಬಂಧಗಳ ಕುರಿತು ಚರ್ಚಿಸಲು ತಾನು ಚೀನಾಕ್ಕೆ ಭೇಟಿ ನೀಡಿದ್ದೆ ಎಂದರು. ಅದು ರಹಸ್ಯ ಭೇಟಿಯಾಗಿರಲಿಲ್ಲ ಎಂದು ಹೇಳುವ ಮೂಲಕ ಹಿರಿಯ ಕಾಂಗ್ರೆಸ್ ನಾಯಕತ್ವದ ವಿರುದ್ಧ ಪರೋಕ್ಷ ದಾಳಿಯನ್ನು ನಡೆಸಿದರು.