×
Ad

‘ಆಪರೇಷನ್ ಸಿಂಧೂರ’ ಪೋಸ್ಟ್ ಪ್ರಕರಣ: ಶರ್ಮಿಷ್ಠಾ ಪನೋಲಿಗೆ ಮಧ್ಯಂತರ ಜಾಮೀನು

Update: 2025-06-05 17:05 IST

 ಶರ್ಮಿಷ್ಠಾ ಪನೋಲಿ | PC : PTI 

ಕೋಲ್ಕತಾ: ‘ಆಪರೇಷನ್ ಸಿಂಧೂರ’ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಪೋಸ್ಟ್‌ಗೆ ಸಂಬಂಧಿಸಿದಂತೆ ಬಂಧಿತ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್ ಹಾಗೂ ಕಾನೂನು ವಿದ್ಯಾರ್ಥಿನಿ ಶರ್ಮಿಷ್ಠಾ ಪನೋಲಿ ಅವರಿಗೆ ಕಲ್ಕತ್ತಾ ಉಚ್ಚ ನ್ಯಾಯಾಲಯವು ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಮುಖ್ಯ ನ್ಯಾಯಾಂಗ ದಂಡಾಧಿಕಾರಿಗಳಿಂದ ಪೂರ್ವಾನುಮತಿ ಪಡೆದುಕೊಳ್ಳದೆ ದೇಶವನ್ನು ತೊರೆಯದಂತೆ ಜಾಮೀನು ಷರತ್ತು ವಿಧಿಸಲಾಗಿದ್ದು,10,000 ರೂ.ಗಳನ್ನು ಠೇವಣಿಯಿರಿಸುವಂತೆಯೂ ಅವರಿಗೆ ನ್ಯಾಯಾಲಯವು ನಿರ್ದೇಶನ ನೀಡಿದೆ.

ತನ್ನ ಸುರಕ್ಷತೆಗೆ ಬೆದರಿಕೆಗಳ ಕುರಿತು ಪನೋಲಿ ಸಲ್ಲಿಸಿರುವ ಅರ್ಜಿಯ ಕುರಿತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಉಚ್ಚ ನ್ಯಾಯಾಲಯವು ಪೋಲಿಸರಿಗೂ ಸೂಚಿಸಿದೆ. ತನ್ನ ಬಂಧನಕ್ಕೆ ಮುನ್ನವೇ ಪನೋಲಿ ಬೆದರಿಕೆಯ ವಿಷಯವನ್ನು ಪ್ರಸ್ತಾವಿಸಿದ್ದರು.

ಈಗ ಅಳಿಸಲಾಗಿರುವ ಪನೋಲಿಯವರ ವಿವಾದಾತ್ಮಕ ವೀಡಿಯೊ ಕೋಮುವಾದಿ ಹೇಳಿಕೆಗಳನ್ನು ಒಳಗೊಂಡಿದ್ದು,ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾದ ಬಳಿಕ ಕೋಲ್ಕತಾ ಪೋಲಿಸರು ಮೇ 30ರಂದು ಗುರುಗ್ರಾಮದಲ್ಲಿ ಅವರನ್ನು ಬಂಧಿಸಿದ್ದರು. ಕೋಲ್ಕತಾದ ನ್ಯಾಯಾಲಯವೊಂದು ಅವರಿಗೆ ಜೂ.13ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು. ಪನೋಲಿ ಪುಣೆಯಲ್ಲಿ ನಾಲ್ಕನೇ ವರ್ಷದ ಕಾನೂನು ವಿದ್ಯಾರ್ಥಿನಿಯಾಗಿದ್ದಾರೆ.

ಪನೋಲಿ ತನ್ನ ವೀಡಿಯೊವನ್ನು ಅಳಿಸಿ ಬೇಷರತ್ ಕ್ಷಮೆಯನ್ನು ಕೋರಿದ್ದರೂ,ಆ ವೇಳೆಗಾಗಲೇ ಅವರ ವಿರುದ್ಧ ಹಲವಾರು ಎಫ್‌ಐಆರ್‌ಗಳು ದಾಖಲಾಗಿದ್ದವು. ಬಳಿಕ ಉಚ್ಚ ನ್ಯಾಯಾಲಯವು ಈ ಎಲ್ಲ ಎಫ್‌ಐಆರ್‌ಗಳನ್ನು ಒಂದುಗೂಡಿಸುವಂತೆ ಮತ್ತು ಕೋಲ್ಕತಾದಲ್ಲಿ ಅವುಗಳ ತನಿಖೆ ನಡೆಸುವಂತೆ ಆದೇಶಿಸಿತ್ತು. ಗುರುವಾರ ನಡೆದ ವಿಚಾರಣೆ ಸಂದರ್ಭ ಉಚ್ಚ ನ್ಯಾಯಾಲಯವು ಪನೋಲಿ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಗಮನಾರ್ಹವಾಗಿ,ಪನೋಲಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಲು ಮಂಗಳವಾರ ನಿರಾಕರಿಸಿದ್ದ ಕಲಕತ್ತಾ ಉಚ್ಚ ನ್ಯಾಯಾಲಯವು,ವಾಕ್ ಸ್ವಾತಂತ್ರ್ಯವು ಸಂಪೂರ್ಣವಲ್ಲ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News