×
Ad

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು 'ರೀಲ್ ಮಿನಿಸ್ಟರ್' ಎಂದು ಬ್ರಾಂಡ್ ಮಾಡಿದ ವಿಪಕ್ಷಗಳು | ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳು ವೈರಲ್

Update: 2024-08-01 19:43 IST

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ | PC : X 

ಹೊಸದಿಲ್ಲಿ : ಗುರುವಾರ ಲೋಕಸಭೆಯ ಅಧಿವೇಶನದಲ್ಲಿ ಪ್ರತಿಪಕ್ಷಗಳು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು "ರೀಲ್ ಮಿನಿಸ್ಟರ್" ಎಂದು ಬ್ರಾಂಡ್ ಮಾಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ತೀವ್ರ ಟೀಕೆ ಮತ್ತು ಮೀಮ್‌ಗಳು ವೈರಲ್ ಆಗಿವೆ.

ರೈಲ್ವೆಯಲ್ಲಿನ ಸುರಕ್ಷತಾ ಕಾಳಜಿಗಳನ್ನು ಪರಿಹರಿಸುವುದಕ್ಕಿಂತ ಹೆಚ್ಚಾಗಿ ಅಶ್ವಿನಿ ವೈಷ್ಣವ್ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿನ ಇಮೇಜ್‌ಗೆ ಹೆಚ್ಚು ಆದ್ಯತೆ ನೀಡುತ್ತಾರೆ ಎಂಬ ಆರೋಪಗಳನ್ನು ಮೀಮ್ ಗಳು ಮಾಡಿವೆ.

ಜುಲೈ 30 ರಂದು ಜಾರ್ಖಂಡ್‌ನ ಜಮ್ಶೆಡ್‌ಪುರ ಬಳಿ ಹೌರಾ-ಮುಂಬೈ ರೈಲಿನ 18 ಬೋಗಿಗಳು ಹಳಿತಪ್ಪಿದ್ದವು. ಘಟನೆಯಲ್ಲಿ ಇಬ್ಬರು ಮೃತಪಟ್ಟು, 22 ಮಂದಿ ಗಾಯಗೊಂಡಿದ್ದರು. ಪ್ರತಿಪಕ್ಷಗಳು ರೈಲ್ವೆ ಸಚಿವರು ರೈಲಿನಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ್ದವು. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ರೈಲ್ವೆ ಸಚಿವರ ಲೋಪವನ್ನು ಒತ್ತಿ ಹೇಳಿದ್ದವು.

ಪ್ರತಿಪಕ್ಷಗಳ ವಾಗ್ದಾಳಿಯ ನಂತರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ತಮ್ಮ ಭಾಷಣದಲ್ಲಿ ಹಿಂದಿನ ಕಾಂಗ್ರೆಸ್ ನೇತೃತ್ವದ ಆಡಳಿತವು ಸ್ವಯಂಚಾಲಿತ ರೈಲು ಸಂರಕ್ಷಣಾ (ಎಟಿಪಿ) ವ್ಯವಸ್ಥೆಯನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ ಸಂಸದ ಹನುಮಾನ್ ಬೇನಿವಾಲ್ ವೈಷ್ಣವ್ ಅವರನ್ನು "ರೀಲ್ ಮಿನಿಸ್ಟರ್" ಮತ್ತು "ರೈಲ್ ಮಿನಿಸ್ಟರ್" ಎಂದು ಕರೆಯುವ ಮೂಲಕ ಚರ್ಚೆಗೆ ಕಿಡಿ ಹಚ್ಚಿದರು. ಇದು ವೈಷ್ಣವ್ ಅವರನ್ನು ಕೆಂಡಾಮಂಡಲವಾಗಿಸಿತು. ತೀಕ್ಷ್ಣವಾದ ಪ್ರತ್ಯುತ್ತರ ನೀಡಿದ ವೈಷ್ಣವ್ ಅವರು ಬೇನಿವಾಲ್ ಅವರನ್ನು "ಶಟ್ ಅಪ್" ಎಂದರು.

ರೈಲ್ವೆ ಸಚಿವರ ಈ ನಡೆಯು ವೈರಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ ಗಳಲ್ಲಿ ಈ ಕುರಿತ ಮೀಮ್ ಗಳು ಹರಿದಾಡುತ್ತಿವೆ. ಸಾಮಾಜಿಕ ಜಾಲತಾಣಗಳ ಬಳಕೆದಾರರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಅಪಹಾಸ್ಯ ಮಾಡುವ ವಿಡಂಬನಾತ್ಮಕ ಮೀಮ್ ಗಳನ್ನು ವೈರಲ್ ಮಾಡಿದ್ದಾರೆ.

ವೈಷ್ಣವ್ ಅವರು ರೈಲ್ವೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಜೂನ್ ಮತ್ತು ಜುಲೈನಲ್ಲಿ ಮೂರು ಪ್ರಮುಖ ರೈಲು ಅಪಘಾತಗಳು ಸಂಭವಿಸಿವೆ. ಈ ಘಟನೆಗಳಲ್ಲಿ ಒಟ್ಟು 17 ಜನರು ಮೃತಪಟ್ಟಿದ್ದಾರೆ. ರೈಲ್ವೆ ಸುರಕ್ಷತಾ ಮೂಲಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ ಎಂದು ಕಾಂಗ್ರೆಸ್ ಸಂಸದರು ಗಮನಸೆಳೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News