ಪ್ರತಿಪಕ್ಷ ಸಂಸದರು ಸದನದೊಳಗೆ ಕಲ್ಲುಗಳನ್ನು ತಂದಿದ್ದರು: ಕಂಗನಾ ರಣಾವತ್ ಆರೋಪ
ಲೋಕಸಭೆಯಲ್ಲಿ ಗದ್ದಲಕ್ಕೆ ಖಂಡನೆ
ಕಂಗನಾ ರಣಾವತ್ (Photo: PTI)
ಹೊಸದಿಲ್ಲಿ: ಬುಧವಾರ ಲೋಕಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ಮೂರು ಪ್ರಮುಖ ಮಸೂದೆಗಳ ಪ್ರತಿಗಳನ್ನು ಹರಿದು ಗೃಹಸಚಿವ ಅಮಿತ್ ಶಾರತ್ತ ಎಸೆದ ಬಳಿಕ ಸಂಭವಿಸಿದ್ದ ಗದ್ದಲವನ್ನು ಖಂಡಿಸಿರುವ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು, ವಿರೋಧ ಪಕ್ಷಗಳ ಸದಸ್ಯರು ಸದನದೊಳಗೆ ಕಲ್ಲುಗಳನ್ನು ತಂದಿದ್ದರು ಎಂದು ಆರೋಪಿಸಿದ್ದಾರೆ. ಘಟನೆಯನ್ನು ನಾಚಿಕೆಗೇಡು ಮತ್ತು ಸಂಸದೀಯ ನಡವಳಿಕೆಗೆ ವಿರುದ್ಧ ಎಂದು ಅವರು ಬಣ್ಣಿಸಿದ್ದಾರೆ.
ಶಾ ಅವರು ಮಸೂದೆಗಳನ್ನು ಮಂಡಿಸಿದಾಗ ಅವರ ಮೈಕ್‌ನ್ನು ಕಿತ್ತುಕೊಳ್ಳಲು ಪ್ರತಿಪಕ್ಷ ನಾಯಕರು ಯತ್ನಿಸಿದ್ದರು ಮತ್ತು ಮಸೂದೆಗಳನ್ನು ಹರಿದು ಹಾಕಿದ್ದರು. ಕೆಲವರು ಕಲ್ಲುಗಳನ್ನೂ ತಂದಿದ್ದು,ಶಾ ಅವರ ಮುಖದತ್ತ ಎಸೆದಿದ್ದರು ಎಂದು ಕಂಗನಾ ಹೇಳಿದ್ದಾರೆ.
ಸದನದೊಳಗೆ ಕಲ್ಲುಗಳನ್ನು ತರಲು ಅವಕಾಶ ನೀಡಿದ್ದು ಹೇಗೆ ಎಂದು ಪ್ರಶ್ನಿಸಿರುವ ಕಂಗನಾರ ಹೇಳಿಕೆಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಹಿಂಸಾತ್ಮಕ ಸಂಸದರನ್ನು ದಂಡಿಸಲು ಯಾವುದೇ ನಿಯಮವಿಲ್ಲವೇ? ಸಂಸತ್ತಿನಲ್ಲಿ ಹಿಂಸೆಗೆ ಸ್ಥಾನವಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಒಬ್ಬರು ಹೇಳಿದ್ದಾರೆ.
ಇದೇ ವೇಳೆ ಕಂಗನಾರ ಹಿಂದಿನ ಹೇಳಿಕೆಗಳನ್ನು ಪರಿಗಣಿಸಿ ಜನರು ಅವರ ಪ್ರಸ್ತುತ ಹೇಳಿಕೆಯ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ.