ಪಂಜಾಬ್ ನೆರೆ ಪೀಡಿತ ಪ್ರದೇಶಗಳಿಗೆ ಪ್ರವಾಸದ ವೇಳೆ ‘ಐಷಾರಾಮಿ ಹಡಗು ಪ್ರಯಾಣ’ದ ಚರ್ಚೆ: ಆಪ್ ಸರಕಾರಕ್ಕೆ ಪ್ರತಿಪಕ್ಷ ತರಾಟೆ
PC : X
ಚಂಡಿಗಢ, ಆ. 30: ನೆರೆ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡಲು ಪ್ರವಾಸಕ್ಕೆ ತೆರಳಿದ್ದ ಆಪ್ ನ ಮೂವರು ಸಚಿವರು ಸ್ವೀಡನ್ ಹಾಗೂ ಗೋವಾದ ಐಷಾರಾಮಿ ಹಡಗಿನ ಬಗ್ಗೆ ಮಾತುಕತೆ ನಡೆಸಿದ ವೀಡಿಯೊ ವೈರಲ್ ಆದ ಬಳಿಕ ಭಗವಂತ ಮಾನ್ ನೇತೃತದ ಪಂಜಾಬ್ ಸರಕಾರ ತೀವ್ರ ಟೀಕೆಗೆ ಗುರಿಯಾಗಿದೆ.
ಸಾಮಾಜಿಕ ಮಾದ್ಯಮದಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿರುವ 27 ಸೆಕೆಂಡ್‌ನ ವೀಡಿಯೊದಲ್ಲಿ ರಾಜ್ಯ ಸಂಪುಟದ ಈ ಮೂವರು ಸಚಿವರು ತರನ್ ತರನ್ ನಲ್ಲಿ ನೆರೆ ಪರಿಸ್ಥಿತಿ ಪರಿಶೀಲಿಸುತ್ತಿರುವ ಸಂದರ್ಭ ತಮ್ಮ ಹಡಗು ಪ್ರವಾಸದ ಕುರಿತು ಚರ್ಚೆ ನಡೆಸುತ್ತಿರುವುದು ಕಂಡು ಬಂದಿದೆ.
ಆಪ್ ನ ಸಚಿವ ಲಾಲ್‌ಜಿತ್ ಸಿಂಗ್ ಭುಲ್ಲರ್ ನ ಫೇಸ್ ಬುಕ್ ಪೇಜ್ ನಲ್ಲಿ ಈ ವೀಡಿಯೊ ನೇರ ಪ್ರಸಾರವಾಗಿತ್ತು. ಆದರೆ, ಇದನ್ನು ದೃಢೀಕರಿಸಲು ಸಾಧ್ಯವಾಗಿಲ್ಲ.
ವೀಡಿಯೊದಲ್ಲಿ ಸಚಿವ ಭುಲ್ಲರ್ ಸ್ವೀಡನ್ ಗೆ ಭೇಟಿ ನೀಡಿದ ಸಂದರ್ಭ ತಾನು ನೋಡಿದ್ದ ಹೊಟೇಲ್ ಹಾಗೂ ಇತರ ಐಷಾರಾಮಿ ಸೌಕರ್ಯಗಳಿದ್ದ ಹಡಗನ್ನು ನೆನಪಿಸಿಕೊಳ್ಳುತ್ತಿರುವುದು ಕೇಳಿ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಅವರು ಮಾತನಾಡುವಾಗ ಆಪ್ ನ ಇನ್ನೋರ್ವ ಸಚಿವ ಬರಿಂದರ್ ಕುಮಾರ್ ಗೋಯಲ್ ಅದೇ ರೀತಿಯ ಪ್ರಯಾಣಿಕರ ಹಡಗು ಗೋವಾದಲ್ಲಿ ಕೂಡ ಇದೆ ಎಂದು ಹೇಳಿದ್ದಾರೆ. ಪ್ರವಾಹ ಪರಿಹಾರದ ಪ್ರಯತ್ನಗಳನ್ನು ತೋರಿಸಲು ಉದ್ದೇಶಿಸಲಾಗಿದ್ದ ಈ ವೀಡಿಯೊ ಸಹಾನುಭೂತಿಗಿಂತ ಹೆಚ್ಚಾಗಿ ಪ್ರವಾಸ ಕಥನದಂತೆ ಕಂಡು ಬಂದಿದೆ.
ಲೈಫ್ ಜಾಕೆಟ್ ಹಾಕಿಕೊಂಡು ದೋಣಿಯಲ್ಲಿ ಕುಳಿತುಕೊಂಡ ಲೋಕೋಪಯೋಗಿ ಖಾತೆ ಸಚಿವ ಹರ್ಭಜನ್ ಸಿಂಗ್, ಪಂಜಾಬ್ ಜಲ ಸಂಪನ್ಮೂಲ ಸಚಿವ ಬರಿಂದರ್ ಕುಮಾರ್ ಗೋಯಲ್ ಹಾಗೂ ಸಾರಿಗೆ ಸಚಿವ ಲಾಲ್ ಜಿತ್ ಸಿಂಗ್ ಭುಲ್ಲರ್ ಅವರು ಸ್ವೀಡನ್ ಹಾಗೂ ಗೋವಾದಲ್ಲಿ ಹಡಗು ಪ್ರವಾಸ ಕೈಗೊಂಡ ಕುರಿತು ಚರ್ಚಿಸುತ್ತಿರುವ ವೀಡಿಯೊವನ್ನು ಪಂಜಾಬ್ ಕಾಂಗ್ರೆಸ್!ನ ಹಿರಿಯ ನಾಯಕ ಹಾಗೂ ಪ್ರತಿಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ತಮ್ಮ ‘ಎಕ್ಸ್’ನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಪಂಜಾಬ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಪ್ರತಾಪ್ ಸಿಂಗ್ ಬಜ್ವಾ ತನ್ನ ‘ಎಕ್ಸ್’ ಖಾತೆಯಲ್ಲಿ ‘‘ಪಂಜಾಬ್‌ನ ನೆರೆ ಪೀಡಿತ ಕುಟುಂಬಗಳು ಒಂದು ಲೋಟ ಕುಡಿಯುವ ನೀರಿಗಾಗಿ ಬೇಡುತ್ತಿದ್ದಾರೆ. ಆದರೆ, ಪಂಜಾಬ್‌ನ ಆಪ್ ಸಚಿವರಾದ ಬರಿಂದರ್ ಗೋಯಲ್, ಲಾಲ್‌ಜಿತ್ ಭುಲ್ಲರ್ ಹಾಗೂ ಹರ್ಭಜನ್ ಸಿಂಗ್ ಅವರು ಸ್ವೀಡನ್ ಹಾಗೂ ಗೋವಾದಲ್ಲಿ ಐಷಾರಾಮಿ ಹಡಗಿನಲ್ಲಿ ಕಳೆದ ತಮ್ಮ ಸುವರ್ಣ ಕ್ಷಣಗಳನ್ನು ನೆನಪು ಮಾಡಿಕೊಳ್ಳುತ್ತಾ ಸಮಯ ಕಳೆಯುತ್ತಿದ್ದಾರೆ’’ ಎಂದು ಹೇಳಿದ್ದಾರೆ.