ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮತಗಳ್ಳತನ, ದಿಲ್ಲಿ ಸ್ಫೋಟದ ಕುರಿತು ಪ್ರಶ್ನಿಸಲಿರುವ ಪ್ರತಿಪಕ್ಷಗಳು : ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ
ಹೊಸದಿಲ್ಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನವೇ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಚುನಾವಣಾ ಆಯೋಗದ ಅನುಮತಿಯೊಂದಿಗೆ ಆಡಳಿತಾರೂಢ ಬಿಜೆಪಿ ಮತಗಳ್ಳತನ ನಡೆಸುತ್ತಿದೆ ಎಂಬ ಗಂಭೀರ ಆರೋಪವನ್ನು ಪ್ರತಿಪಕ್ಷಗಳು ಅಧಿವೇಶನದಲ್ಲಿ ಪ್ರಬಲವಾಗಿ ಎತ್ತಲಿವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪ್ರಮೋದ್ ತಿವಾರಿ ರವಿವಾರ ತಿಳಿಸಿದ್ದಾರೆ.
ಸರ್ವಪಕ್ಷ ಸಭೆಗೆ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ತಿವಾರಿ, “ಪ್ರಜಾಪ್ರಭುತ್ವದ ಮೇಲೆ ನೇರ ದಾಳಿ ನಡೆಯುತ್ತಿದೆ. ಇದು ಕೇವಲ ಮತಗಳ್ಳತನವಲ್ಲ, ನೇರವಾಗಿ ಮತಗಳ ದರೋಡೆ. ಇದನ್ನು ನಾವು ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನಿಸದೇ ಬಿಡುವುದಿಲ್ಲ,” ಎಂದು ಕಿಡಿಕಾರಿದರು.
ಇತ್ತೀಚೆಗೆ ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋಟದ ಘಟನೆ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿದೇಶಾಂಗ ನೀತಿ ಹದಗೆಟ್ಟಿರುವುದು ಸೇರಿದಂತೆ ಹಲವು ವಿಷಯಗಳನ್ನೂ ಪ್ರತಿಪಕ್ಷಗಳು ಚರ್ಚೆಗೆ ತರಲಿದೆ ಎಂದು ತಿವಾರಿ ಹೇಳಿದರು.
ಡಿ.1ರಿಂದ ಡಿ.19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯಲಿದೆ. ಅಧಿವೇಶನಲ್ಲಿ ಸರಕಾರ ಉಭಯಸದನಗಳ ಸುಗಮ ನಿರ್ವಹಣೆಗೆ ಸರ್ವಪಕ್ಷ ಸಭೆ ಕರೆದಿದೆ.