ನಿದ್ದೆ ಸಮಸ್ಯೆಗಳಿಗೆ ಓಟಿಟಿ, ಸಾಮಾಜಿಕ ಜಾಲತಾಣ ಕಾರಣ!
ಸಾಂದರ್ಭಿಕ ಚಿತ್ರ
ಬೆಂಗಳೂರು: ದೇಶದಲ್ಲಿ ಸುಮಾರು ಶೇಕಡ 58ರಷ್ಟು ಮಂದಿ ರಾತ್ರಿ 11 ಗಂಟೆಯ ಬಳಿಕ ನಿದ್ದೆ ಮಾಡುತ್ತಾರೆ; ಅಂತೆಯೇ ಅರ್ಧದಷ್ಟು ಮಂದಿ ಬೆಳಗ್ಗೆ ಏಳುವ ವೇಳೆಗೆ ಸುಸ್ತಾದ ಭಾವನೆಯಲ್ಲಿರುತ್ತಾರೆ ಹಾಗೂ ಶೇಖಡ 88ರಷ್ಟು ಮಂದಿಗೆ ರಾತ್ರಿ ವೇಳೆ ಹಲವು ಬಾರಿ ಎಚ್ಚರವಾಗುತ್ತದೆ. ಪ್ರತಿ ನಾಲ್ಕು ಮಂದಿಯ ಪೈಕಿ ಒಬ್ಬರಿಗೆ ನಿದ್ರಾಹೀನತೆ ಕಾಡುತ್ತಿದೆ ಎನ್ನುವ ಅಂಶ ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್ ಕಾರ್ಡ್‍ನಿಂದ ಬಹಿರಂಗವಾಗಿದೆ. ವಿಶ್ವ ನಿದ್ದೆ ದಿನದ ಅಂಗವಾಗಿ ಇದನ್ನು ಬಿಡುಗಡೆ ಮಾಡಲಾಗಿದೆ.
ʼವೇಕ್‍ಫಿಟ್.ಕೋʼ ಎಂಬ ಸಂಸ್ಥೆ ಈ ವರದಿಯನ್ನು ಸಿದ್ಧಪಡಿಸಿದ್ದು, ಡಿಜಿಟಲ್ ಯುಗಕ್ಕೆ ತೆರೆದುಕೊಂಡಿರುವುದು, ಹೆಚ್ಚುತ್ತಿರುವ ಒತ್ತಡದ ಮಟ್ಟದಂಥ ಅಂಶಗಳು ನಿದ್ದೆ ಸಮಸ್ಯೆಗಳ ಉಲ್ಬಣಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣ ಹಾಗೂ ಓವರ್ ದ ಟಾಕ್ (ಓಟಿಟಿ) ಪ್ಲಾಟ್‍ಫಾರಂಗಳು ನಿದ್ರಾಹೀನತೆಗೆ ಪ್ರಮುಖ ಕಾರಣಗಳಾಗಿವೆ. ಇದರಿಂದಾಗಿ ಶೇಕಡ 54ರಷ್ಟು ಮಂದಿ ಸಾಮಾನ್ಯವಾಗಿ ನಿದ್ದೆಗೆ ತೆರಳುವ ಸಮಯವನ್ನು ಮೀರಿ ಎಚ್ಚರವಾಗಿರುತ್ತಾರೆ. ಮಲಗುವ ಮುನ್ನ ತಾವು ಫೋನ್ ಬಳಕೆ ಮಾಡುತ್ತೇವೆ ಎಂದು ಶೇಕಡ 88ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.
ಸುಮಾರು 10 ಸಾವಿರ ಮಂದಿಯನ್ನು ಈ ಸಮೀಕ್ಷೆಯಲ್ಲಿ ಸಂಪರ್ಕಿಸಲಾಗಿದ್ದು, ಶೇಕಡ 30ರಷ್ಟು ಮಂದಿ ರಾತ್ರಿ ಎಚ್ಚರವಾಗಿದ್ದು, ತಮ್ಮ ಭವಿಷ್ಯದ ಬಗ್ಗೆ ಚಿಂತಿಸುತ್ತಿರುತ್ತಾರೆ. ಶೇಕಡ 31ರಷ್ಟು ಮಂದಿ ಒಳ್ಳೆಯ ಹಾಸಿಗೆ ಮತ್ತು ನಿಯತವಾದ ನಿದ್ದೆ ಹವ್ಯಾಸಗಳು ನಿದ್ದೆಯ ಗುಣಮಟ್ಟ ಹೆಚ್ಚಲು ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶೇಖಡ 38ರಷ್ಟು ಮಂದಿ ಡಿಜಿಟಲ್ ಸಾಧನಗಳಿಂದ ದೂರ ಇರುವುದು ಗುಣಮಟ್ಟದ ನಿದ್ದೆಗೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.