13.9 ಲಕ್ಷ ವೈದ್ಯರ ಪೈಕಿ ಕೇವಲ 996 ಮಂದಿ ಎನ್ಎಂಆರ್ ನಲ್ಲಿ ನೋಂದಣಿ!
PC: freepik
ಹೊಸದಿಲ್ಲಿ: ಅಲೋಪತಿ ವೈದ್ಯರ ಸಮಗ್ರ ಮತ್ತು ಸಕ್ರಿಯ ದತ್ತಾಂಶವನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಆರಂಭವಾದ ನ್ಯಾಷನಲ್ ಮೆಡಿಕಲ್ ರಿಜಿಸ್ಟರ್ ವ್ಯವಸ್ಥೆ ಜಾರಿಗೆ ಬಂದ ಒಂದು ವರ್ಷದಲ್ಲಿ ಒಟ್ಟು 13.9 ಲಕ್ಷ ಅಲೋಪಥಿ ವೈದ್ಯರ ಪೈಕಿ ಕೇವಲ 996 ಮಂದಿ ಮಾತ್ರ ರಾಜ್ಯ ವೈದ್ಯಕೀಯ ಮಂಡಳಿಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಆಗಸ್ಟ್ 8ರವರೆಗೆ ಒಟ್ಟು 11200 ಅರ್ಜಿಗಳು ಬಂದಿದ್ದು, ಈ ಪೈಕಿ ಶೇಕಡ 91ರಷ್ಟು ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಆರ್ ಟಿಐ ಪ್ರಶ್ನೆಯೊಂದಕ್ಕೆ ಉತ್ತರಿಸಿದೆ.
ಈ ಮಹತ್ವಾಕಾಂಕ್ಷಿ ಯೋಜನೆಗೆ ಕೇಂದ್ರ ಆರೋಗ್ಯ ಸಚಿವರು 2024 ಆಗಸ್ಟ್ 23ರಂದು ಚಾಲನೆ ನೀಡಿದ್ದರು. ಎನ್ಎಂಸಿಯ ಎನ್ಎಂಆರ್ ಪೋರ್ಟೆಲ್ ಗೆ ಚಾಲನೆ ನೀಡಿ ಎಲ್ಲ ಭಾರತದಲ್ಲಿ ಪ್ರಾಕ್ಟೀಸ್ ಆರಂಭಿಸಲು ಅರ್ಹರಾದ ಎಲ್ಲ ಎಂಬಿಬಿಎಸ್ ವೈದ್ಯರು ಇಲ್ಲಿ ನೋಂದಾಯಿಸಬೇಕು ಎಂದು ಸೂಚಿಸಲಾಗಿತ್ತು. ಆದರೆ ಯೋಜನೆ ಟೇಕಾಫ್ ಆಗುವಲ್ಲಿ ವಿಫಲವಾಗಿರುವುದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಡಿಜಿಟಲ್ ಅರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಈ ಉಪಕ್ರಮ ಆರಂಭಿಸಲಾಗಿತ್ತು. ಅರೆವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ವೃತ್ತಿಪರರಿಗೆ ಇಂಥದ್ದೇ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು.
ಆದಾಗ್ಯೂ ಇಡೀ ಆರೋಗ್ಯ ವ್ಯವಸ್ಥೆಯಲ್ಲಿ ಅತ್ಯಂತ ಸಣ್ಣ ಸಮುದಾಯವಾಗಿ ಪರಿಗಣಿಸ್ಪಡುವ ವೈದ್ಯರ ನೋಂದಣಿ ಮಾತ್ರ ವೇಗ ಪಡೆದಿಲ್ಲ. ಸುಮಾರು 35 ಲಕ್ಷದಷ್ಟಿರುವ ನರ್ಸ್ ಗಳು ಮತ್ತು ಅವರ ದುಪ್ಪಟ್ಟು ಸಂಖ್ಯೆಯಲ್ಲಿರುವ ಅರೆವೈದ್ಯಕೀಯ ಸಿಬ್ಬಂದಿ ಪೈಕಿ ಎಷ್ಟು ಮಂದಿ ನೋಂದಾಯಿಸಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.
ರಾಜ್ಯ ವೈದ್ಯಕೀಯ ಮಂಡಳಿಗಳಲ್ಲಿ ಒಟ್ಟು 13.9 ಲಕ್ಷ ಎಂಬಿಬಿಎಸ್ ವೈದ್ಯರು ನೋಂದಾಯಿಸಿಕೊಂಡಿದ್ದು, ಸುಮಾರು ಶೇಕಡ 80ರಷ್ಟು ವೈದ್ಯರು ಸೇವೆಗೆ ಲಭ್ಯರಿದ್ದಾರೆ ಎಂದು ಆರೋಗ್ಯ ಸಚಿವಾಲಯ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿತ್ತು. ಎನ್ಎಂಸಿ 2023ರ ಜೂನ್ 8ರಂದು ರಿಜಿಸ್ಟ್ರೇಷನ್ ಆಫ್ ಮೆಡಿಕಲ್ ಪ್ರಾಕ್ಟೀಶನರ್ಸ್ ಅಂಡ್ ಲೈಸನ್ಸ್ ಟೂ ಪ್ರಾಕ್ಟೀಸ್ ಮೆಡಿಸಿನ್ ರೆಗ್ಯುಲೇಶನ್-2023 ನಿಬಂಧನೆಗಳನ್ನು ಹೊರಡಿಸಿತ್ತು.