ದಿಲ್ಲಿಯಲ್ಲಿ 200ಕ್ಕೂ ಅಧಿಕ ವಿಮಾನಯಾನಗಳು ವಿಳಂಬ
ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಶನಿವಾರ ರಾತ್ರಿಯಿಡೀ ಸುರಿದ ಗುಡುಗು ಸಹಿತ ಭಾರೀ ಮಳೆಯಾದ ಪರಿಣಾಮ ದಿಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 200ಕ್ಕೂ ಅಧಿಕ ವಿಮಾನಯಾನಗಳು ವಿಳಂಬಗೊಂಡಿದ್ದವು.
ಭಾರೀ ಮಳೆಯಿಂದಾಗಿ ಹಲವಾರು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದ್ದು,ದಿನವಿಡೀ ವಾಹನಗಳ ಸಂಚಾರಕ್ಕೆ ವ್ಯತ್ಯಯವುಂಟಾಗಿತ್ತು.
ಶನಿವಾರ ರಾತ್ರಿ 11:30ರಿಂದ ರವಿವಾರ ಬೆಳಿಗ್ಗೆ ನಾಲ್ಕು ಗಂಟೆಯವರೆಗೆ ದಿಲ್ಲಿಗೆ ಆಗಮಿಸುತ್ತಿದ್ದ ಕನಿಷ್ಠ 49 ವಿಮಾನಯಾನಗಳ ಮಾರ್ಗಗಳನ್ನು ಬದಲಿಸಲಾಗಿತ್ತು.
ರವಿವಾರ ಪೂವಾಹ್ನ 11:30ರ ವೇಳೆಗೆ 227 ವಿಮಾನಯಾನಗಳು ವಿಳಂಬಗೊಂಡಿದ್ದು ಸರಾಸರಿ ಕಾಯುವಿಕೆ ಅವಧಿಯು 28 ನಿಮಿಷಗಳಾಗಿದ್ದವು ಎಂದು ಸುದ್ದಿಸಂಸ್ಥೆಯು ತಿಳಿಸಿದೆ.
ಶನಿವಾರ ರಾತ್ರಿ ಭಾರತೀಯ ಹವಾಮಾನ ಇಲಾಖೆಯು ರಾಷ್ಟ್ರ ರಾಜಧಾನಿ ಪ್ರದೇಶಕ್ಕೆ ರೆಡ್ ಅಲರ್ಟ್ ಘೋಷಿಸಿತ್ತು. ತೀವ್ರ ಗುಡುಗು ಸಹಿತ ಮಳೆಯಾಗುವ ಅಥವಾ ಆಗಾಗ್ಗೆ ಮಿಂಚಿನೊಂದಿಗೆ ಧೂಳು ಬಿರುಗಾಳಿ ಬೀಸುವ ಮುನ್ಸೂಚನೆಯನ್ನು ಅದು ನೀಡಿತ್ತು.