ಆಕ್ಸ್‌ಫಾಮ್ ಇಂಡಿಯಾ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಬಿಐ
PC : PTI
ಹೊಸದಿಲ್ಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಆಕ್ಸ್‌ಫಾಮ್ ಇಂಡಿಯಾ ಮತ್ತು ಅದರ ಪದಾಧಿಕಾರಿಗಳ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಸಿಬಿಐಯು ಈ ತಿಂಗಳ ಆದಿ ಭಾಗದಲ್ಲಿ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಜಾಗತಿಕ ಸರಕಾರೇತರ ಸಂಘಟನೆ ಆಕ್ಸ್‌ಫಾಮ್ ಇಂಟರ್‌ನ್ಯಾಶನಲ್‌ನ ಭಾರತೀಯ ಘಟಕ ಮತ್ತು ಅದರ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಭ್ ಬೆಹಾರ್ (ಪ್ರಸಕ್ತ ಆಕ್ಸ್‌ಫಾಮ್ ಇಂಟರ್‌ನ್ಯಾಶನಲ್‌ನ ಕಾರ್ಯಕಾರಿ ನಿರ್ದೇಶಕ)ರನ್ನು ಹೆಸರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಕ್ಸ್‌ಫಾಮ್ ಭಾರತದಲ್ಲಿ ಬುಡಕಟ್ಟು ಜನರು, ದಲಿತರು, ಮುಸ್ಲಿಮರು, ಮಹಿಳೆಯರು ಮತ್ತು ಬಾಲಕಿಯರ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿತ್ತು. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು 2023 ಎಪ್ರಿಲ್‌ನಲ್ಲಿ, ಆಕ್ಸ್‌ಫಾಮ್ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿತ್ತು. ಸಿಬಿಐಯು ಅದೇ ತಿಂಗಳು ಮೊಕದ್ದಮೆ ದಾಖಲಿಸಿ, ಸಂಸ್ಥೆಯ ಕಚೇರಿಗಳ ಮೇಲೆ ದಾಳಿ ನಡೆಸಿತು. ಬಳಿಕ, ಆಕ್ಸ್‌ಫಾಮ್ ಇಂಡಿಯದ ಎಫ್‌ಸಿಆರ್‌ಎ ಪರವಾನಿಗೆಯನ್ನು ರದ್ದುಪಡಿಸಲಾಗಿತ್ತು.
ಎಫ್‌ಸಿಆರ್‌ಎ ನವೀಕರಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ತಿರಸ್ಕರಿಸಲಾಗಿದ್ದರೂ, ವಿದೇಶಿ ನಿಧಿಗಳ ಮೂಲಕ ತನ್ನ ಕಾರ್ಯನಿರ್ವಹಣೆಯನ್ನು ಮುಂದುವರಿಸಲು ವ್ಯವಸ್ಥೆಯೊಂದನ್ನು ರೂಪಿಸಲು ಆಕ್ಸ್‌ಫಾಮ್ ಇಂಡಿಯಾವು ಯೋಜನೆ ರೂಪಿಸುತ್ತಿತ್ತು ಎಂದು ಸಿಬಿಐ ತನ್ನ ಮೊದಲ ಮಾಹಿತಿ ವರದಿಯಲ್ಲಿ ಆರೋಪಿಸಿದೆ.