×
Ad

ಡ್ರಗ್ಸ್ ಪೆಡ್ಲರ್ ಗಳ ಮನೆಗಳನ್ನು ಬುಲ್ಡೋಝರ್ ಮೂಲಕ ಕೆಡವಬಹುದು ಎಂಬ ಕರ್ನಾಟಕದ ಗೃಹ ಸಚಿವರ ಹೇಳಿಕೆ ಆಘಾತ ತಂದಿದೆ: ಪಿ. ಚಿದಂಬರಂ

ಕರ್ನಾಟಕವು ʼಬುಲ್ಡೋಝರ್ ನ್ಯಾಯʼದಂತಹ ಅಕ್ರಮ ಹಾದಿಯಲ್ಲಿ ಸಾಗಬಾರದು ಎಂದ ಕಾಂಗ್ರೆಸ್ ಹಿರಿಯ ನಾಯಕ

Update: 2025-12-13 11:38 IST

ಜಿ. ಪರಮೇಶ್ವರ / ಪಿ. ಚಿದಂಬರಂ (PTI) 

ಹೊಸದಿಲ್ಲಿ: ರಾಜ್ಯದಲ್ಲಿ ಮಾದಕ ದ್ರವ್ಯ ಮಾರಾಟದಿಂದ ಬಂದ ಹಣದಿಂದ ನಿರ್ಮಿಸಲಾದ ಮನೆಗಳು ಮತ್ತು ಕಟ್ಟಡಗಳನ್ನು ಕೆಡವಬೇಕು ಎಂಬ ಕರ್ನಾಟಕ ಗೃಹ ಸಚಿವ ಜಿ. ಪರಮೇಶ್ವರ ಅವರ ಹೇಳಿಕೆಗಳಿಗೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಂಸದ ಪಿ. ಚಿದಂಬರಂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂತಹ ಕ್ರಮಗಳು ಕಾನೂನಿನ ಸರಿಯಾದ ಪ್ರಕ್ರಿಯೆಗೆ ವಿರುದ್ಧವಾಗಿದ್ದು, ಕರ್ನಾಟಕವು ʼಬುಲ್ಡೋಝರ್ ನ್ಯಾಯʼದಂತಹ ಅಕ್ರಮ ಹಾದಿಯಲ್ಲಿ ಸಾಗಬಾರದು ಎಂದು ಅವರು ಎಚ್ಚರಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಚಿದಂಬರಂ, ಮನೆಗಳನ್ನು ಯಾವುದೇ ನ್ಯಾಯಾಂಗ ಪ್ರಕ್ರಿಯೆ ಇಲ್ಲದೆ ಧ್ವಂಸಗೊಳಿಸುವುದು ಸುಪ್ರೀಂ ಕೋರ್ಟ್‌ನ ಸ್ಪಷ್ಟ ನಿರ್ದೇಶನಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. “ಮಾದಕ ದ್ರವ್ಯ ಮಾರಾಟಗಾರರ ಮನೆಗಳನ್ನು ಬುಲ್ಡೋಝರ್ ಮೂಲಕ ಕೆಡವಬಹುದು ಎಂಬ ವರದಿಗಳು ನನಗೆ ಆಘಾತ ತಂದಿವೆ. ವರದಿ ತಪ್ಪಾಗಿರಲಿ ಎಂಬುದು ನನ್ನ ನಿರೀಕ್ಷೆ. ಕಾನೂನಿನ ಸರಿಯಾದ ಪ್ರಕ್ರಿಯೆ ಇಲ್ಲದೆ ಮನೆಗಳನ್ನು ಕೆಡವುವುದು ಕಾನೂನುಬಾಹಿರ ಮತ್ತು ಕುಟುಂಬದ ಇತರ ಸದಸ್ಯರ ಮೂಲಭೂತ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ” ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಅನುಸರಿಸಲಾಗುತ್ತಿದೆ ಎನ್ನಲಾದ ‘ಬುಲ್ಡೋಝರ್ ನ್ಯಾಯ’ ತಪ್ಪು, ಅಕ್ರಮ ಹಾಗೂ ಅನ್ಯಾಯ ಎಂಬುದು ಕಾಂಗ್ರೆಸ್ ಪಕ್ಷದ ನಿಲುವು ಎಂದು ಸ್ಪಷ್ಟಪಡಿಸಿದ ಚಿದಂಬರಂ, “ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕ ಇಂತಹ ಅಕ್ರಮ ಮಾರ್ಗವನ್ನು ಅನುಸರಿಸಬಾರದು” ಎಂದು ತಿಳಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ, ಮಾದಕವಸ್ತು ಮಾರಾಟದಿಂದ ಸಂಗ್ರಹಿಸಿದ ಹಣ ಬಳಸಿ ನಿರ್ಮಿಸಲಾದ ರಚನೆಗಳನ್ನು ಸರ್ಕಾರ ಕೆಡವಲು ಸಿದ್ಧವಿದೆ ಎಂದು ಹೇಳಿರುವುದಾಗಿ ವರದಿಯಾಗಿತ್ತು. ಈ ಹೇಳಿಕೆಯ ಹಿನ್ನೆಲೆಯಲ್ಲಿ ಚಿದಂಬರಂ ಅವರ ಪ್ರತಿಕ್ರಿಯೆ ಮಹತ್ವ ಪಡೆದುಕೊಂಡಿದೆ.

ಈ ನಡುವೆ, ನವೆಂಬರ್ 2024ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪನ್ನು ಚಿದಂಬರಂ ಉಲ್ಲೇಖಿಸಿದ್ದಾರೆ. ಮಾಜಿ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ನೇತೃತ್ವದ ಪೀಠ, ಅಪರಾಧ ಸಾಬೀತಾಗುವವರೆಗೆ ವ್ಯಕ್ತಿಯನ್ನು ನಿರ್ದೋಷಿ ಎಂದು ಪರಿಗಣಿಸಬೇಕೆಂಬ ತತ್ವವನ್ನು ಪುನರುಚ್ಚರಿಸಿತ್ತು. ಮನೆಯಲ್ಲಿರುವ ಒಬ್ಬ ವ್ಯಕ್ತಿಯ ಮೇಲೆ ಆರೋಪ ಅಥವಾ ಶಿಕ್ಷೆಯ ಆಧಾರದ ಮೇಲೆ ಸಂಪೂರ್ಣ ಕಟ್ಟಡವನ್ನು ಕೆಡವುವುದು, ಆ ಮನೆಯಲ್ಲಿ ವಾಸಿಸುವ ಇಡೀ ಕುಟುಂಬದ ಮೇಲೆ ಸಾಮೂಹಿಕ ಶಿಕ್ಷೆ ವಿಧಿಸಿದಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

“ಇಂತಹ ಕ್ರಮಗಳನ್ನು ನಮ್ಮ ಸಂವಿಧಾನಾತ್ಮಕ ವ್ಯವಸ್ಥೆಯೂ ಕ್ರಿಮಿನಲ್ ನ್ಯಾಯಶಾಸ್ತ್ರವೂ ಯಾವತ್ತೂ ಅನುಮತಿಸುವುದಿಲ್ಲ,” ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಜೊತೆಗೆ, ಪೂರ್ವ ಕಾರಣ ಕೇಳಿ ನೋಟಿಸ್ ನೀಡದೆ ಯಾವುದೇ ಕಟ್ಟಡ ಧ್ವಂಸಗೊಳಿಸಬಾರದು ಹಾಗೂ ಸ್ಥಳೀಯ ಕಾನೂನುಗಳಲ್ಲಿ ನಿಗದಿಪಡಿಸಿದ ಅವಧಿ ಅಥವಾ ನೋಟಿಸ್ ಜಾರಿಯಾದ ದಿನಾಂಕದಿಂದ ಕನಿಷ್ಠ 15 ದಿನಗಳ ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News