×
Ad

ಪದ್ಮಪ್ರಶಸ್ತಿಗಳಿಗೆ ನಾಮನಿರ್ದೇಶ, ಶಿಫಾರಸು ಸ್ವೀಕಾರಕ್ಕೆ ಸೆ.15 ಅಂತಿಮ ದಿನಾಂಕ

Update: 2024-09-03 20:48 IST

PC: livemint.com 

ಹೊಸದಿಲ್ಲಿ :2025ರ ಸಾಲಿನ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಹಾಗೂ ಶಿಫಾರಸುಗಳನ್ನು ಆನ್‌ಲೈನ್‌ನಲ್ಲಿ ಸ್ವೀಕರಿಸುವ ಪ್ರಕ್ರಿಯೆಯು ನಡೆಯುತ್ತಿದ್ದು, ಸೆಪ್ಟೆಂಬರ್ 15 ಅಂತಿಮ ದಿನಾಂಕವಾಗಿದೆಯೆಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ತಿಳಿಸಿದೆ.

ದೇಶದ ಎಲ್ಲಾ ಪೌರರು ಪದ್ಮಪ್ರಶಸ್ತಿಗಳಿಗಾಗಿ ಸ್ವಯಂನಾಮನಿರ್ದೇಶನ ಸೇರಿದಂತೆ ನಾಮನಿರ್ದೇಶನಗಳನ್ನು ಹಾಗೂ ಶಿಫಾರಸುಗಳನ್ನು ಸಲ್ಲಿಸಬಹುದೆಂದು ಅದು ತಿಳಿಸಿದೆ.

‘‘ 2025ರ ಸಾಲಿನ ಪದ್ಮ ಪ್ರಶಸ್ತಿಗಳಿಗಾಗಿನ ನಾಮನಿರ್ದೇಶನಗಳನ್ನು ಅಥವಾ ಶಿಫಾರಸು ಸ್ವೀಕಾರ ಪ್ರಕ್ರಿಯೆನ್ನು 2024ರ ಮೇ 1ರಂದು ಆರಂಭಿಸಲಾಗಿದ್ದು, ಅವುಗಳನ್ನು 2025ರ ಗಣರಾಜ್ಯೋತ್ಸವದ ಸಂದರ್ಭ ಪ್ರಕಟಿಸಲಾಗುವುದು. ಪದ್ಮ ಪ್ರಶಸ್ತಿಗಳಿಗಾಗಿನ ನಾಮನಿರ್ದೇಶನಗಳಿಗೆ 2024ರ ಸೆಪ್ಟೆಂಬರ್ 15 ಕೊನೆಯ ದಿನಾಂಕವಾಗಿದೆ ಎಂದು ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಪದ್ಮ ಪ್ರಶಸ್ತಿಗಳಿಗಾಗಿನ ನಾಮನಿರ್ದೇಶನ ಅಥವಾ ಶಿಫಾರಸುಗಳನ್ನು ರಾಷ್ಟ್ರೀಯ ಪುರಸ್ಕಾರ್ ಪೋರ್ಟಲ್ awards.gov.in ನಲ್ಲಿ ಮಾತ್ರವೇ ಸ್ವೀಕರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಪದ್ಮ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಇವು ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರಗಳಾಗಿವೆ. 1954ರಲ್ಲಿ ಆರಂಭಿಸಲಾದ ಈ ಪುರಸ್ಕಾರಗಳನ್ನು ಪ್ರತಿ ವರ್ಷವೂ ಗಣರಾಜ್ಯೋತ್ಸವ ದಿನಾಚರಣೆಯ ಸಂದರ್ಭ ಘೋಷಿಸಲಾಗುತ್ತದೆ. ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡಾ, ಔಷಧಿ, ಸಾಮಾಜಿಕ ಕಾರ್ಯ, ವಿಜ್ಞಾನ, ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರಿಕ ಸೇವೆ, ವಾಣಿಜ್ಯ ಹಾಗೂ ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉತ್ಕೃಷ್ಟ ಹಾಗೂ ಅಸಾಧಾರಣ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.ಯಾವುದೇ ಜನಾಂಗ, ವೃತ್ತಿ , ಹುದ್ದೆ ಅಥವಾ ಲಿಂಗಭೇದವಿಲ್ಲದೆ ಈ ಪುರಸ್ಕಾರಗಳನ್ನು ಪಡೆಯಲು ಯಾವುದೇ ವ್ಯಕ್ತಿಗಳು ಅರ್ಹರಾಗಿರುತ್ತಾರೆ.

ಮೋದಿ ಸರಕಾರವು 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಬಳಿಕ, ಎಲೆಯಮರೆಯ ಕಾಯಿಯಂತಿರುವ ಸಾಧಕರಿಗೆ ಪುರಸ್ಕಾರಗಳನ್ನು ನೀಡುವ ಮೂಲಕ ಪದ್ಮಪ್ರಶಸ್ತಿಗಳನ್ನು ‘ಜನತಾ ಪದ್ಮ’ವಾಗಿ ಮಾರ್ಪಡಿಸಿದೆ ಎಂದು ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News