ಪಹಲ್ಗಾಮ್ ದಾಳಿ ಹಿಂದಿರುವ ʼದಿ ರೆಸಿಸ್ಟೆನ್ಸ್ ಫ್ರಂಟ್ʼ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಅಮೆರಿಕ
Photo | indiatoday
ವಾಷಿಂಗ್ಟನ್ : ಪಹಲ್ಗಾಮ್ ದಾಳಿಯ ರುವರಿ ಎನ್ನಲಾದ ಪಾಕಿಸ್ತಾನ ಮೂಲದ ಲಷ್ಕರೆ-ತೈಬಾ ಭಯೋತ್ಪಾದಕ ಸಂಘಟನೆಗೆ ಸೇರಿದ ʼದಿ ರೆಸಿಸ್ಟೆನ್ಸ್ ಫ್ರಂಟ್ʼ(TRF) ಅನ್ನು ಅಮೆರಿಕ ಅಧಿಕೃತವಾಗಿ ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಈ ಕುರಿತು ಹೇಳಿಕೆಯನ್ನು ಹೊರಡಿಸಿದ್ದಾರೆ. ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಅನ್ನು ಗೊತ್ತುಪಡಿಸಿದ ವಿದೇಶಿ ಭಯೋತ್ಪಾದಕ ಸಂಸ್ಥೆ (FTO) ಮತ್ತು ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕ (SDGT) ಸಂಘಟನೆ ಎಂದು ಹೆಸರಿಸುತ್ತಿದೆ ಎಂದು ಹೇಳಿದರು.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದಿದ್ದ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟು, 16 ಮಂದಿ ಗಾಯಗೊಂಡಿದ್ದರು. 2008ರ ಮುಂಬೈ ದಾಳಿಯ ನಂತರ ಭಾರತದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಎಂದು ಪಹಲ್ಗಾಮ್ ದಾಳಿಯನ್ನು ಅಮೆರಿಕದ ಅಧಿಕಾರಿಗಳು ಬಣ್ಣಿಸಿದ್ದಾರೆ.
ದಿ ರೆಸಿಸ್ಟೆನ್ಸ್ ಫ್ರಂಟ್(ಟಿಆರ್ಎಫ್) ಪಹಲ್ಗಾಮ್ನಲ್ಲಿ ನಡೆದ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು. ಕೆಲವು ದಿನಗಳ ನಂತರ ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡು ದಾಳಿಯನ್ನು ನಿರಾಕರಿಸಿತ್ತು.
ಇದಕ್ಕೂ ಮುನ್ನ ಭಾರತದ ಸರ್ವಪಕ್ಷ ಸಂಸದೀಯ ನಿಯೋಗ ಭೇಟಿಯ ಸಂದರ್ಭದಲ್ಲಿ, ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ಬೆಂಬಲವನ್ನು ಪುನರುಚ್ಚರಿಸಿತ್ತು.